ಬೆಂಗಳೂರು: ಪರ ಪುರುಷನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ತಾಯಿ ಬಗ್ಗೆ ತಂದೆಗೆ ಹೇಳಿದ್ದಕ್ಕೆ ಆಕ್ರೋಶಗೊಂಡ ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದ ಆರೋಪದಡಿ ತಾಯಿ ಹಾಗೂ ಆಕೆಯ ಸ್ನೇಹಿತನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ.
ಆರ್.ಆರ್.ನಗರ ನಿವಾಸಿ ಜಯಮ್ಮ, ಈಕೆಯ ಸ್ನೇಹಿತ ಹೇಮಂತ್ ಬಂಧಿತ ಆರೋಪಿಗಳು. ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದ ಜಯಮ್ಮನಿಗೆ ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯ ಪರಿಚಯವಾಗಿ ನಂತರ ಸ್ನೇಹಕ್ಕೆ ತಿರುಗಿತ್ತು. ಕಾಲ ಕ್ರಮೇಣ ಮಹಿಳೆ ಹಾಗೂ ಗಂಡ ಹೇಮಂತ್ ಕುಟುಂಬಸ್ಥರು ಜಯಮ್ಮನ ಮನೆಗೆ ಶಿಫ್ಟ್ ಆಗಿದ್ದಾರೆ.
ಇನ್ನೊಂದೆಡೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜಯಮ್ಮನ ಗಂಡ ಕಿರಣ್ ಜೈಲು ಸೇರಿದ್ದ. ಈ ದಂಪತಿಗೆ ಆರೇಳು ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದರು. ಆಸ್ಪತ್ರೆಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜಯಮ್ಮ ಜೀವನ ನಡೆಸುತ್ತಿದ್ದಳು. ಸ್ನೇಹಿತೆಯ ಕುಟುಂಬ ಈಕೆಯ ಮನೆಗೆ ಶಿಫ್ಟ್ ಆಗಿದ್ದರಿಂದ ಅನುಸರಿಸಿಕೊಂಡು ಹೋಗಿದ್ದಳು.
ಸಿಗರೇಟ್ನಿಂದ ಸುಟ್ಟು ವಿಕೃತಿ: ಪಂಪ್ಸೆಟ್ ರಿಪೇರಿ ಕೆಲಸ ಮಾಡುತ್ತಿದ್ದ ಹೇಮಂತ್, ಮದುವೆಯಾಗಿದ್ದರೂ ಹೆಂಡತಿಯ ಸ್ನೇಹಿತೆ ಜಯಮ್ಮನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಇದು ಪತ್ನಿಗೂ ತಿಳಿದಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ ಎನ್ನಲಾಗ್ತಿದೆ. ಜೈಲಿನಿಂದಲೇ ಕಿರಣ್ ಹೆಂಡತಿ ಜಯಮ್ಮನಿಗೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ. ಈ ವೇಳೆ ಮಕ್ಕಳು ಹೇಮಂತ್ ಬಂದಿರುವ ಬಗ್ಗೆ ತಂದೆಗೆ ಹೇಳಿದ್ದರು. ಇದರಿಂದ ಕೋಪಗೊಂಡ ಆತ ಫೋನ್ ನಲ್ಲೇ ಹೆಂಡತಿ ಮೇಲೆ ಕಿಡಿಕಾರಿದ್ದ. ಇದರಿಂದ ಅಸಮಾನಧಾನಗೊಂಡ ಜಯಮ್ಮ ಹಾಗೂ ಪ್ರದೀಪ್ ಇಬ್ಬರು ಕಳೆದ ಎರಡು ತಿಂಗಳಿಂದ ಮಕ್ಕಳಿಗೆ ಹೊಡೆದು ಚಿತ್ರಹಿಂಸೆ ನೀಡಿದ್ದರು. ಇತ್ತೀಚೆಗೆ ತಂದೆ ಕಿರಣ್ ಕರೆ ಮಾಡಿದಾಗ ತಾಯಿ ಹಿಂಸೆ ನೀಡುತ್ತಿರುವ ಬಗ್ಗೆ ಹೇಳಿದ್ದಕ್ಕೆ ಸಿಗರೇಟಿನಿಂದ ಸುಟ್ಟು ಪ್ರದೀಪ್ ವಿಕೃತಿ ಮೆರೆದಿದ್ದ.
ಈ ಮಾಹಿತಿ ಆಧರಿಸಿ ಪೊಲೀಸರು ಮನೆ ಬಳಿ ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.