ಮಹದೇವಪುರ (ಬೆಂಗಳೂರು) : ಬೈಕ್ ರೈಡಿಂಗ್ ಮಾಡುವಾಗ ಸಿಗುವ ಖುಷಿ ಅಷ್ಟಿಷ್ಟಲ್ಲ. ಬೈಕ್ನಲ್ಲಿ ವಿಶ್ವ ಸುತ್ತಬೇಕು ಎಂಬ ಕನಸು ಕಂಡ ಅದೆಷ್ಟೋ ಯುವ ರೈಡರ್ಗಳಿಗೆ ಮಾದರಿಯಾದ ಕಿಂಗ್ ರಿಚರ್ಡ್ ಎಂಬ ಯುವಕನ ಓಟಕ್ಕೆ ಬ್ರೇಕ್ ಹಾಕಿದ್ದು ಮಾತ್ರ ಒಂಟೆಯ ರೂಪದಲ್ಲಿ ಬಂದ ಯಮರಾಯ. ಹೀಗೆ ಅಗಲಿದ ಮಗನ ನೆನಪಿಗಾಗಿ ಸ್ಮಾರಕ ನಿರ್ಮಿಸಿದ ತಾಯಿ ಪ್ರತಿದಿನ ಸ್ಮರಿಸುತ್ತಿದ್ದಾರೆ.
ಬೆಂಗಳೂರು ಮೂಲದ ಯುವ ಉದ್ಯಮಿ ಕಿಂಗ್ ರಿಚರ್ಡ್ ಎಂಬುವರು ಕಾರು ರೈಡರ್ ಆಗಿದ್ದು, ಅನೇಕ ದೇಶಗಳನ್ನು ಸುತ್ತಿದ್ದಾರೆ. ಸಿಂಗಾಪುರದಲ್ಲಿ ಸ್ನೇಹಿತರೊಬ್ಬರ ಜೊತೆ ಬೈಕ್ ರೈಡಿಂಗ್ ಕುರಿತು ಮಾಹಿತಿ ಪಡೆದು 2015 ರಿಂದ ಬೈಕ್ ಓಡಿಸುವ ಹವ್ಯಾಸ ಪ್ರಾರಂಭಿಸಿದ್ದರು. ಎರಡು ಬಾರಿ ವಿದೇಶಿ ಪ್ರವಾಸ ಮಾಡಿ, ಐವತ್ತಕ್ಕೂ ಹೆಚ್ಚು ದೇಶಗಳನ್ನು ಸುತ್ತುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಆದರೆ, 2021ರಲ್ಲಿ ಬೆಂಗಳೂರಿನಿಂದ ಕಾಶ್ಮೀರಕ್ಕೆ ಹೋಗುತ್ತಿದ್ದಾಗ ಜೈಸಲ್ಮೇರ್ ಜಿಲ್ಲೆಯ ಫತೇಘರ್ ಉಪವಿಭಾಗದಲ್ಲಿ ಒಂಟೆ ಅಡ್ಡ ಬಂದು ಅಪಘಾತ ಸಂಭವಿಸಿದ್ದು, ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಫುಟ್ಬಾಲ್ ನಟ್ಮೆಗ್ನಲ್ಲಿ ಗಿನ್ನಿಸ್ ದಾಖಲೆ: ವಿದೇಶಿ ಆಟಗಾರರ ದಾಖಲೆ ಮುರಿದ ಮಂಗಳೂರು ಯುವಕ
ರಿಚರ್ಡ್ ಅಗಲಿಕೆಯಿಂದ ಕಣ್ಣೀರಿನಲ್ಲಿ ಮುಳುಗಿದ್ದ ಕುಟುಂಬಸ್ಥರು ಇದೀಗ ಅವರ ನೆನಪುಗಳನ್ನು ಜೀವಂತವಾಗಿಡುವ ಪ್ರಯತ್ನ ಮಾಡಿದ್ದಾರೆ. ಕಿಂಗ್ ರಿಚರ್ಡ್ ಹೆಚ್ಚು ಸಮಯ ಕಳೆಯುತ್ತಿದ್ದ ಮಹದೇವಪುರ ಕ್ಷೇತ್ರದ ಯರಪ್ಪನಹಳ್ಳಿ ಸಮೀಪದಲ್ಲಿ ಈಜಿಪ್ಟ್ ಶೈಲಿಯಲ್ಲಿ ಸ್ಮಾರಕ ಮತ್ತು ಥಾಯ್ಲೆಂಡ್ ಮಾದರಿಯ ತ್ರೀಡಿ ಪಿಚ್ಚರ್, ಗುಹೆಗಳನ್ನು ನಿರ್ಮಿಸಿದ್ದಾರೆ. ಜೊತೆಗೆ, ರಿಚರ್ಡ್ ಮಾಡಿದ ಸಾಧನೆಗಳು, ವಿವಿಧ ದೇಶಗಳಿಗೆ ಭೇಟಿ ನೀಡಿದ ಛಾಯಾಚಿತ್ರಗಳು, ತಾವು ಉಪಯೋಗಿಸುತ್ತಿದ್ದ ದ್ವಿಚಕ್ರ ವಾಹನ, ನಾನಾ ದೇಶದ ಕರೆನ್ಸಿ, ನಾಣ್ಯಗಳು, ಮತ್ತು ರಿಚರ್ಡ್ ಸಾಧನೆ ವೀಕ್ಷಿಸಲು ಹೋಂ ಥಿಯೇಟರ್ ಎಂಬ ಕೊಠಡಿಯನ್ನು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ರಿಚರ್ಡ್ಸ್ ವಂಡರ್ ವರ್ಲ್ಡ್ ಎಂಬ ಸುಂದರವಾದ ಮ್ಯೂಸಿಯಂನಲ್ಲಿ ಆತನ ಬದುಕಿನ ಸಾಧನೆಗಳನ್ನು, ಸುಂದರ ಕಲಾಕೃತಿಗಳ ನಿರ್ಮಾಣ ಕೂಡ ಮಾಡಿಡಲಾಗಿದೆ. ಅಗಲಿದ ಮಗನ ಸ್ಮರಣಾರ್ಥವಾಗಿ ನಿರ್ಮಿಸಿರುವ ಈ ಮ್ಯೂಸಿಯಂ, ಅನೇಕ ಅಭಿಮಾನಿಗಳು ಹಾಗೂ ಅವರ ಕುಟುಂಬಸ್ಥರಲ್ಲಿ ಕಿಂಗ್ ರಿಚರ್ಡ್ ಶ್ರೀನಿವಾಸನ್ ಇನ್ನೂ ಬದುಕಿದ್ದಾರೆ ಎಂಬ ನಂಬಿಕೆ ಮೂಡಿಸುತ್ತಿದೆ.
ಇದನ್ನೂ ಓದಿ: ಎರಡು ಕೈಗಳಿಂದ ಏಕಕಾಲದಲ್ಲಿ 2 ಭಾಷೆ ಮತ್ತು 20 ವಿಭಿನ್ನ ಬಗೆಗಳಲ್ಲಿ ಬರೆಯಬಲ್ಲ ಪ್ರತಿಭಾವಂತೆ ಈ ಆದಿಸ್ವರೂಪ
ವಾರದ ಎಲ್ಲಾ ದಿನಗಳಲ್ಲಿ ಈ ಮ್ಯೂಸಿಯಂ ತೆರೆದಿದ್ದು, ವೀಕೆಂಡ್ನಲ್ಲಿ ಬೆಂಗಳೂರಿನ ಅನೇಕ ಭಾಗಗಳಿಂದ ಬೈಕ್ ರೈಡರ್ಸ್ ಇಲ್ಲಿಗೆ ಬಂದು ರಿಚರ್ಡ್ ಅವರಿಗೆ ನಮನ ಸಲ್ಲಿಸಿ, ವಿಶ್ರಾಂತಿ ಪಡೆದು ಹೋಗುತ್ತಾರೆ. ಜೊತೆಗೆ, ಈ ಭಾಗದ ಜನರಿಗೆ ಪ್ರವಾಸಿ ಸ್ಥಳವಾಗಿ ಕೂಡ ಮಾರ್ಪಟ್ಟಿದ್ದು, ಮಕ್ಕಳಿಗೆ ಆಟ ಆಡಲು ವಿವಿಧ ಆಟಿಕೆಗಳನ್ನು ಇಡಲಾಗಿದೆ. ಪ್ರತಿ ವರ್ಷ ಮಾರ್ಚ್ 7 ರಂದು ಕಿಂಗ್ ರಿಚರ್ಡ್ ಹುಟ್ಟುಹಬ್ಬಕ್ಕೆ ಸುತ್ತಮುತ್ತಲಿನ ಸರ್ಕಾರಿ ಶಾಲೆ ಹಾಗೂ ಆಶ್ರಮದ ಮಕ್ಕಳನ್ನು ಕರೆಯಿಸಿ ಕ್ರೀಡೆ ಆಯೋಜಿಸುವ ಮೂಲಕ ಬಹುಮಾನ ವಿತರಿಸಲಾಗುತ್ತದೆ.