ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೂರನೇ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ 700ರ ಗಡಿ ದಾಟಿದ್ದು, ಒಟ್ಟಾರೆ ಸೋಕಿತರ ಸಂಖ್ಯೆ 5,290ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವುದು ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 735 ಪ್ರಕರಣಗಳು ದಾಖಲಾಗಿವೆ. ಈವರೆಗೆ 543 ಮಂದಿ ಗುಣಮುಖರಾಗಿದ್ದು, 4,649 ಮಂದಿ ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಸಂಖ್ಯೆಯೂ ನೂರರ ಗಡಿ ಸಮೀಪಿಸುತ್ತಿದ್ದು, ಇಂದು ಇಬ್ಬರು ಮೃತಪಟ್ಟಿದ್ದಾರೆ. ಈವರೆಗೆ 97 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 735 ಮಂದಿಗೆ ಕೊರೊನಾ ಸೋಂಕು ಇರಿವುದು ದೃಢಪಟ್ಟಿದ್ದು, ಇವರೆಗೆಲ್ಲ ಹೇಗೆ ಹರಡಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ನಗರದಲ್ಲಿ 191 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾರ್ ರೂಂ ವರದಿಯ ಪ್ರಕಾರ ಜೂನ್ ತಿಂಗಳಲ್ಲಿ 4,904 ಮಂದಿಗೆ ಸೋಂಕು ಹರಡಿತ್ತು. ಮೇ ತಿಂಗಳಲ್ಲಿ ಕೇವಲ 386 ಮಂದಿಗೆ ಕೊರೊನಾ ಹಬ್ಬಿತ್ತು. ಜೂನ್ 22 ರಿಂದ 30ರವರೆಗೆ 3,150 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈವರೆಗೆ 78,440 ಮಂದಿಯ ಸೋಂಕು ಪರೀಕ್ಷೆ ನಡೆಸಲಾಗಿದೆ. ಕಂಟೈನ್ಮೆಂಟ್ ಪ್ರದೇಶಗಳನ್ನು ಮಾತ್ರ ಏರಿಕೆ ಮಾಡಿಲ್ಲ. ಕೊರೊನಾ ಪಾಸಿಟಿವಿಟಿ ರೇಟ್ ಶೇ 1.17 ರಿಂದ ಶೇ 6.25ಕ್ಕೆ ಏರಿಕೆಯಾಗಿದೆ.