ಬೆಂಗಳೂರು: ಕಳೆದ ಎರಡು ತಿಂಗಳಲ್ಲಿ ವರ್ಗಾವಣೆ ಮೂಲಕ 500 ಕೋಟಿ ರೂಪಾಯಿ ವ್ಯವಹಾರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವರ್ಗಾವಣೆಯಲ್ಲೇ ಕಳೆದ ಎರಡು ತಿಂಗಳಲ್ಲಿ 500 ಕೋಟಿ ರೂ. ವ್ಯವಹಾರ ಆಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ರೀತಿ ಆದರೆ ರಾಜ್ಯ ಉಳಿಯುತ್ತಾ?. ಇವುಗಳಿಗೆ ಎಲ್ಲಿಂದ ದಾಖಲೆ ತರುವುದು? ಎಂದು ಪ್ರಶ್ನಿಸಿದರು.
ಮೊನ್ನೆ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರೇಟ್ ಕಾರ್ಡ್ ತೋರಿಸಿದ್ದೆ. ಅದಕ್ಕೆ ಪ್ರತಿಯಾಗಿ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಪತ್ರಿಕಾ ವರದಿಯನ್ನು ತೋರಿಸಿದ್ದರು. ನನ್ನ ಕಾಲದಲ್ಲಿ ಲಂಚ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಯಾವುದಪ್ಪ ನನ್ನ ಕಾಲದಲ್ಲಿ ಅವ್ಯವಹಾರ ಆಗಿದೆ ಎಂದು ನಾನೇ ಭಯಗೊಂಡೆ. ಪತ್ರಿಕಾ ವರದಿ ತರಿಸಿ ನೋಡಿದೆ. ಅದರಲ್ಲಿ 2008 -2013 ರಲ್ಲಿ ಮಾಗಡಿ ಕ್ಷೇತ್ರದಲ್ಲಿ 600 ಕೋಟಿ ರೂ. ಅಕ್ರಮದ ಬಗ್ಗೆ ತಿಳಿಸಿದ್ದಾರೆ. ಇದು ನಾನು ಸಿಎಂ ಆಗುವ ಮೊದಲು ಆಗಿದ್ದ ಪ್ರಕರಣ. 40% ಕಮಿಷನ್ ಹೇಳುತ್ತರಲ್ಲಾ ಇವರು, ಈ ಪತ್ರಿಕಾ ವರದಿಯಲ್ಲಿ 58% ಕಮಿಷನ್ ಎಂದು ಬರೆದಿದ್ದಾರೆ. ರೇವಣ್ಣ ಅವರಿಗಾಗಲಿ, ನನಗಾಗಲಿ ಯಾವನಾದರು ಏನಾದರು ಕೊಟ್ಟಿರುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಅದೇನೋ ಸೂರಿ ಪಾಯಲಾ ಅಂತೆ. ಪಾಯಲ್ ಎಂಬವನು ಕನ್ನಡಿಗನಾ?. ವಿದೇಶಿಗ ಇರಬೇಕು? ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಅವಧಿಯಲ್ಲಿ ಹಣಕಾಸು ಇಲಾಖೆಯ ಅನುಮತಿ ಇಲ್ಲದೆ 1,500 ಕೋಟಿ ರೂ. ಕಾರ್ಯಾದೇಶವನ್ನೂ ಕೊಟಿದ್ದರು. ಈಗ 40 ಜನ ನಾಯಕರನ್ನು ಕರೆದು ಅದೇನು ದೇಶಕ್ಕೆ ಸಂದೇಶ ಕೊಡುತ್ತಾರೆ ಅನ್ನೋದನ್ನು ನೋಡೋಣ ಎಂದರು.
ರೈತರ ಸಮಾಧಿ ಮೇಲೆ ಮಹಾಘಟಬಂಧನ ಮಾಡುತ್ತಿದ್ದೀರಿ: ಯಾವ ಪುರುಷಾರ್ಥಕ್ಕೆ ಇಲ್ಲಿ ಮಹಾಘಟಬಂಧನ ಮಾಡುತ್ತಿದ್ದೀರಾ? ಎಂದು ವಾಗ್ದಾಳಿ ನಡೆಸಿದ ಹೆಚ್ಡಿಕೆ, ಪ್ರಸ್ತುತ ರಾಜಕಾರಣ ಬೆಳವಣಿಗೆ ರಾಜ್ಯದ ರಾಜಧಾನಿಗೆ ವರ್ಗಾವಣೆ ಆಗಿದೆ. ಮಹಾಘಟಬಂಧನಕ್ಕೆ ಹಲವಾರು ಪಕ್ಷಗಳು ದೇಶದ ನಾನಾ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಹೆಚ್ಎಎಲ್ ರಸ್ತೆಯ ಇಕ್ಕೆಲಗಳಲ್ಲೂ ಕಟೌಟ್ ಮೇಲೆ ಕಟೌಟ್ ಹಾಕಿದ್ದಾರೆ. ಯಾರ ಸಮಾಧಿ ಮೇಲೆ ಮಹಾಘಟಬಂಧನ ನಾಯಕರಿಗೆ ಕಟೌಟ್ ಮೂಲಕ ಸ್ವಾಗತ ಕೋರುತ್ತಿದ್ದೀರಾ? ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಾಧಿ ಮೇಲೆ ವಿಜೃಂಭಣೆಯಿಂದ ಕಟೌಟ್ ಹಾಕಿ ಸ್ವಾಗತ ಕೋರಿದ್ದೀರ. ರೈತರ ಬಗ್ಗೆ ಯಾವ ಸಚಿವರು ಅನುಕಂಪದ ಮಾತನಾಡಿಲ್ಲ. ಅದೇನೂ ಗ್ಯಾರಂಟಿ ಮಾಡೆಲ್. ಗ್ಯಾರಂಟಿ ಜಾರಿಯಾದ ಬಳಿಕನೇ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಮಾಡೆಲ್ ಅನ್ನು ದೇಶಕ್ಕೆ ಕೊಡಲು ಹೊರಟಿದ್ದಾ? ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಳೆದ ಬಾರಿ ವಿಧಾನಸೌಧದ ಮುಂದೆ ನಾವೆಲ್ಲರೂ ಕೈ ಎತ್ತಿನೇ ನಿಂತಿದ್ದೆವು. ಆ ಮೇಲೆ ಏನಾಯಿತು ಗೊತ್ತಲ್ಲ. ಮಹಾಘಟಬಂಧನಕ್ಕೆ ಆವತ್ತು ಆದ ಗತಿಯೇ ಆಗುತ್ತೆ ಎಂದು ಹೆಚ್ಡಿಕೆ ವ್ಯಂಗ್ಯವಾಡಿದ್ದಾರೆ.
ಏನು ನಿಮ್ಮ ಸಾಧನೆ?. ನೀವು ಕೃಷಿಗೆ, ನೀರಾವರಿಗೆ ಅನುದಾನ ಕಡಿತ ಮಾಡಿದ್ದೀರಾ. ಯಾವ ಪುರುಷಾರ್ಥಕ್ಕೆ ಇಲ್ಲಿ ಮಹಾಘಟಬಂಧನ ಮಾಡುತ್ತಿದ್ದೀರಾ?. ನನ್ನ ರಾಜ್ಯದ ರೈತರ ಆತ್ಮಹತ್ಯೆ ಹುಡುಕಾಟ ಅಲ್ಲ. ನಿಮ್ಮ ಮಹಾಘಟಬಂಧನದಲ್ಲಿ ರಾಜ್ಯದ ರೈತರ ಬದುಕು ಏನು ಎಂದು ಹೇಳಿ. ಇವರು ಐದು ವರ್ಷದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಸಾಲ ಏನಿತ್ತು?. ಎರಡು ವರ್ಷದಲ್ಲಿ ಸಿದ್ದರಾಮಯ್ಯ ಅವರು 28,000 ಕೋಟಿ ರೂ. ಸಾಲ ಮಾಡಿದ್ದರು. ಬಿಜೆಪಿ ಅವಧಿಯಲ್ಲಿ ಕೋವಿಡ್ ಇತ್ತು. ಈಗ ಏನಕ್ಕೆ 85,000 ಕೋಟಿ ರೂ. ಸಾಲ ಮಾಡಿದ್ದೀರ?. ನೀರಾವರಿ, ಕೃಷಿಗೆ ಎಲ್ಲಿ ಹೆಚ್ಚುವರಿ ಅನುದಾನ ಕೊಟ್ಟಿದ್ದೀರಿ?. ಒಂದು ಒಳ್ಳೆ ಹೆಸರು ಮಾಡಿ ಹೋಗಿ. ಬೀದಿ ಬೀದಿಯಲ್ಲಿ ಈ ತರದ ಆರೋಪ ನಾನು ಎಂದೂ ಕೇಳಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಮೇಯ್ತಾ ಇದ್ದಾರೆ: ಮಹಾಘಟಬಂಧನಕ್ಕೆ ಹಣ ಎಲ್ಲಿಂದ ಎಂಬ ಬಗ್ಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ನವರು ಮೇಯ್ತಾ ಇದ್ದಾರೆ. ಇಲ್ಲಿ ಖಜಾನೆ ಚೆನ್ನಾಗಿದೆ. ದೇಶಕ್ಕೆ ಇವರೇ ಹಂಚಬೇಕಲ್ಲಾ. ಈಗ ಮೇಯಿಸುತ್ತಿದ್ದಾರೆ. ನಮ್ಮದು ಸಂಪದ್ಬರಿತವಾದ ರಾಜ್ಯವಾಗಿದೆ. ರಾಜ್ಯವನ್ನು ಅಮಿತ್ ಶಾ ಹೇಳಿದಂತೆ ಎಟಿಎಂ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಾನು ತಾಜ್ ವೆಸ್ಟ್ನಲ್ಲಿದ್ದರೆ ಮಹಾ ಅಪರಾಧ. ಈಗ ಎಲ್ಲರೂ ಅಲ್ಲೇ ಇದ್ದಾರೆ. ಅವರು ಮಾಡಿದರೆ ಘನಂಧಾರಿ ಕೆಲಸ. ನಾವು ಮಾಡಿದರೆ ಮಹಾಪರಾಧ ಎಂದು ಹೆಚ್ಡಿಕೆ ತಿರುಗೇಟು ಕೊಟ್ಟಿದ್ದಾರೆ.
ನಿತೀಶ್ ಕುಮಾರ್ ಯಾವ ಬಿ ಟೀಂ?: ನಿತೀಶ್ ಕುಮಾರ್ ಇದೇ ಬಿಜೆಪಿ ಜೊತೆ ಸರ್ಕಾರ ಮಾಡಿದ್ದರು. ಮತ್ತೆ ಆರ್ಜೆಡಿ ಜೊತೆ ಸರ್ಕಾರ ಮಾಡಿದರು. ಮತ್ತೆ ಆರ್ಜೆಡಿಎಗೆ ಟೋಪಿ ಹಾಕಿ ಬಿಜೆಪಿ ಜೊತೆ ಹೋದರು. ಈಗ ಮತ್ತೆ ಬಿಜೆಪಿಗೆ ಟೋಪಿ ಹಾಕಿ ಆರ್ಜೆಡಿ ಜೊತೆ ಸರ್ಕಾರ ಮಾಡಿದ್ದಾರೆ. ಅವರೇ ಅವಕಾಶವಾದಿ ಎಂದು ಕುಮಾರಸ್ವಾಮಿ ಟೀಕಿಸಿದರು.
ಅವರ ಸಮ್ಮುಖದಲ್ಲಿ ಈಗ ಮಹಾಘಟಬಂಧನ ಮಾಡುತ್ತಿದ್ದೀರಿ. ನಿತೀಶ್ ಕುಮಾರ್ ಸಿದ್ಧಾಂತ ಏನು?. ಅವರು ಎಷ್ಟು ಪಾರ್ಟಿಗೆ ಹೋದರು?. ನಾನು ಒಂದು ಬಾರಿ ಮೈತ್ರಿ ಮಾಡಿದ್ದೆ ಅಷ್ಟೇ. ಅದಕ್ಕೆ ನನ್ನನ್ನು ಬಿ ಟೀಂ ಎಂದು ಕರೆದರು. ನಿತೀಶ್ ಕುಮಾರ್ ಅವರನ್ನು ಯಾವ ಟೀಂಗೆ ಸೇರಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಜೆಡಿಎಸ್ ಅನ್ನು ಬಿಜೆಪಿ ಜೊತೆ ವಿಲೀನ ಮಾಡಲು ಹೇಳಿದ್ದರು. ನಾನು ಏನು ಮಾಡಬೇಕು ಅಂತ ಇವರ ಅಪ್ಪಣೆ ತಗೋಬೇಕಾ? ಎಂದು ತಿರುಗೇಟು ನೀಡಿದ್ದಾರೆ.
ವಿಪಕ್ಷ ನಾಯಕ ಆಯ್ಕೆ ಮಾಡಲು ಮನವಿ: ಇದೇ ವೇಳೆ ವಿಪಕ್ಷ ನಾಯಕ ಸ್ಥಾನದ ಬಗ್ಗೆ ಪ್ರತಿಕ್ರಿಯಿಸುತ್ತ, ಬಿಜೆಪಿಯಲ್ಲಿ ಹಲವರು ಸಮರ್ಥ ನಾಯಕರಿದ್ದಾರೆ. ಆದಷ್ಟು ಬೇಗ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ 66 ಶಾಸಕರು ಗೆದ್ದಿದ್ದಾರೆ. ನಿಮ್ಮ ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಆದಷ್ಟು ಬೇಗ ಆಯ್ಕೆ ಮಾಡಿ. ಅವರು ಮುಜುಗರಕ್ಕೆ ಒಳಗಾಗುವುದು ಬೇಡ. ಮಾಧ್ಯಮದಲ್ಲಿ ಬಂದಂತೆ ನನಗೆ ವಿರೋಧ ಪಕ್ಷ ನಾಯಕ ಸ್ಥಾನದ ಅಪೇಕ್ಷೆ ಇಲ್ಲ. ನನ್ನ ಬಳಿ 19 ಸ್ಥಾನ ಇದೆ. ನಾನು ಕೇಂದ್ರದಲ್ಲಿ ಮಂತ್ರಿ ಆಗುತ್ತೇನೆ ಎಂಬುದು ಯಾವುದೂ ಚರ್ಚೆಗೆ ಬಂದಿಲ್ಲ. ಲೋಕಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಎಲ್ಲರ ಜೊತೆ ಸೇರಿ ನಾವು ಎನ್ಡಿಎ ಜೊತೆ ಹೋಗಬೇಕೋ, ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಮಂತ್ರಿ ಸ್ಥಾನದ ಆಮಿಷ : ಇದೇ ವೇಳೆ ತಮ್ಮ ಪಕ್ಷದ ಶಾಸಕರನ್ನು ಸೆಳೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತ, ಕಾಂಗ್ರೆಸ್ಗೆ 135 ಸ್ಥಾನ ಬಂದಿರುವುದು ಸಮಾಧಾನ ಆಗಿಲ್ಲ. ಅದಕ್ಕೆ ಅಡಿಷನ್ ಮಾಡಲು, ನಮ್ಮ ಶಾಸಕರಿಗೆ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯಗೆ ಕನ್ನಡ ಭಾಷಣ ತಿಳುವಳಿಕೆ ಇಲ್ಲ: ಕಳೆದ ಚುನಾವಣೆ ವೇಳೆ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ನೆಲಕಚ್ಚಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಬೆಯಲ್ಲಿ ಪ್ರಸ್ತಾಪ ಮಾಡದೇ, ವಿಧಾನಪರಿಷತ್ ನಲ್ಲಿ ಅದನ್ನು ಪ್ರಸ್ತಾಪಿಸಿದ್ದಾರೆ. 123 ಸ್ಥಾನ ಗೆಲ್ಲದೇ ಹೋದರೇ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದು, ಇನ್ನೂ ವಿಸರ್ಜನೆ ಮಾಡಿಲ್ಲ ಎಂದು ಕೇಳಿದ್ದಾರೆ. ಅವರು ಕನ್ನಡದ ಪಂಡಿತ ಅಂತ ತಿಳಿದುಕೊಂಡಿದ್ದೆ. ಅವರಿಗೆ ಕನ್ನಡ ಬರಲ್ಲ ಅಂತ ಈಗ ಗೊತ್ತಾಗಿದೆ ಎಂದು ಟೀಕಿಸಿದ್ದಾರೆ.
ನಾನು ಸಾವಿರಾರು ಬಾರಿ ಹೇಳಿದ್ದೇನೆ, ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲು 123 ಸ್ಥಾನ ಬೇಕು. ಈ ಯೋಜನೆಯನ್ನು ಐದು ವರ್ಷದಲ್ಲಿ ಜಾರಿ ಮಾಡದೇ ಇದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಅಂದಿದ್ದೆ. ನಿಮಗೆ ಕನ್ನಡ ಭಾಷೆ ತಿಳುವಳಿಕೆ ಇಲ್ಲ. 1999 ರಲ್ಲಿ ಸಿದ್ದರಾಮಯ್ಯ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಆಗ ಜೆಡಿಎಸ್ ಕೇವಲ 10 ಸ್ಥಾನ ಗೆದ್ದಿತ್ತು. 2013ರಲ್ಲಿ ಇವರು ಹೋದ ಬಳಿಕ ಏಕಾಂಗಿಯಾಗಿ ಹೋರಾಡಿ 40 ಸ್ಥಾನ ಗೆದ್ದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯಗೆ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ?: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಿಷ್ಟು.