ಬೆಂಗಳೂರು: 150ನೇ ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ನಾಳೆ ಪಾದಯಾತ್ರೆ ಮೂಲಕ ವಿಶಿಷ್ಟ ರೀತಿಯಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಿದ್ದೇವೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ತಿಳಿಸಿದ್ದಾರೆ.
ಕೆಪಿಸಿಸಿಯಲ್ಲಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿ ಕಚೇರಿಯಿಂದ ಸ್ವತಂತ್ರ ಉದ್ಯಾನವರೆಗೆ ಪಾದಯಾತ್ರೆ ನಡೆಸಲಿದ್ದೇವೆ. ಸಾವಿರಾರು ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವತಂತ್ರ ಉದ್ಯಾನದಲ್ಲಿ ಒಟ್ಟು 150 ಗಂಧದ ಗಿಡ ನೆಡಲಿದ್ದೇವೆ. ಈ ಮೂಲಕವಾಗಿ ವಿಶಿಷ್ಟ ಆಚರಣೆ ಮಾಡಲಿದ್ದೇವೆ ಎಂದರು.
ಪ್ರಧಾನಿ ವಿರುದ್ಧ ಬೇಸರ:
ಬಿಹಾರ ಸಂತ್ರಸ್ತರ ಬಗ್ಗೆ ಪ್ರಧಾನಿ ಸಾಂತ್ವನದ ಮಾತನಾಡಿ, ಸುಳ್ಳು ಹೇಳಿ ಸಂಚಲನವನ್ನೇ ಮೋದಿ ಸೃಷ್ಟಿಸಿದ್ದಾರೆ. ನಾಯಕತ್ವವನ್ನು ವೈಭವೀಕರಿಸುವುದನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಡೋನಾಲ್ಡ್ ಟ್ರಂಪ್ ಪರವಾಗಿ ಅಮೆರಿಕಾದಲ್ಲಿ ಪ್ರಚಾರ ನಡೆಸ್ತಾರೆ. ಯಾವುದೇ ರಾಷ್ಟ್ರದ ಪ್ರಧಾನಿ ಇಂತಹ ಕೆಲಸ ಮಾಡಿಲ್ಲ. ಯಾವುದೇ ರಾಷ್ಟ್ರದ ಅಧ್ಯಕ್ಷೀಯ ಚುನಾವಣೆಯಲ್ಲಿ ಕ್ಯಾಂಪೇನು ಮಾಡಿದ್ದೂ ಇಲ್ಲ. ಟ್ರಂಪ್ ಸೋತು, ವಿರೋಧಿಗಳು ಆಯ್ಕೆಯಾದರೆ ಏನು ಮಾಡ್ತೀರಾ? ವಿಪಕ್ಷ ಗೆದ್ದರೆ ದೇಶದ ಬಗ್ಗೆ ಯಾವ ಮರ್ಯಾದೆ ಕೊಡಬಹುದು ಎಂದು ಟ್ರಂಪ್ ಪರ ಮೋದಿ ಪ್ರಚಾರಕ್ಕೆ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಹಲವು ರಾಜ್ಯಗಳಲ್ಲಿ ಪ್ರವಾಹವಿದೆ. ಇದರ ಬಗ್ಗೆ ಪ್ರಧಾನಿ ಮೋದಿ ತಲೆ ಕೆಡಿಸಿಕೊಂಡಿಲ್ಲ. ವಿದೇಶಿ ಪ್ರವಾಸವೇ ಅವರಿಗೆ ಹೆಚ್ಚಾಗಿದೆ. ರಾಜ್ಯಕ್ಕೆ ಸಿಂಗಲ್ ಪೈಸೆ ನೆರವು ಕೊಟ್ಟಿಲ್ಲ. 54 ಲಕ್ಷ ವಿದ್ಯಾರ್ಥಿಗಳು ನಮ್ಮ ರಾಜ್ಯದಲ್ಲಿದ್ದಾರೆ. 620 ಕೋಟಿ ಕೇಂದ್ರ ಅನುದಾನ ರಿಲೀಸ್ ಮಾಡಿತ್ತು. ಈ ಭಾರಿ 710 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೂ ಇಲ್ಲಿನ ಶಿಕ್ಷಣ ಸಚಿವರು ಯೂನಿಫಾರಂ ಇಲ್ಲ ಅಂತಾರೆ. ಈ ಬಾರಿ ಒಂದೇ ಜೊತೆ ಯೂನಿಫಾರಂ ಕೊಟ್ಟಿದ್ದಾರೆ. ಇನ್ನೊಂದು ಯೂನಿಫಾರಂ ಕೊಡಲ್ಲ ಅಂದಿದ್ದಾರೆ. ಆ ಮಕ್ಕಳು ಒಂದನ್ನೇ ಒಗೆದು ಹಾಕೋಕೆ ಸಾಧ್ಯವೇ ಎಂದರು.
ಆಪರೇಷನ್ ಕಮಲಕ್ಕೆ ಸಾವಿರ ಕೋಟಿ ಖರ್ಚು ಮಾಡ್ತೀರ. ಮಕ್ಕಳಿಗೆ 120 ಕೋಟಿ ಅನುದಾನ ಕೊಡಲ್ಲ ಅಂದರೆ ಹೇಗೆ? ನಿಮಗೆ ಯೋಗ್ಯತೆಯಿದೆಯೇ ಸುರೇಶ್ ಕುಮಾರ್ ಎಂದು ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜನರ ಗಮನ ಬೇರೆಡೆ ಸೆಳೆಯಲು ಐಟಿ, ಇಡಿ ಮೂಲಕ ದಾಳಿ ಮಾಡಿಸಲಾಗುತ್ತಿದೆ. ಪ್ರತಿಪಕ್ಷ ನಾಯಕರನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ವಿಪಕ್ಷ ನಾಯಕರ ಮೇಲೆ ರಾಜಕೀಯ ಸೇಡಿಗೆ ಮುಂದಾಗಿದ್ದಾರೆ ಎಂದರು.