ಬೆಂಗಳೂರು/ನವದೆಹಲಿ:- ದೇಶದ ರಾಸಾಯನಿಕ ಹಾಗೂ ಪೆಟ್ರೋಕೆಮಿಕಲ್ಸ್ ವಲಯದಲ್ಲಿ 2025ರ ವೇಳೆಗೆ 10 ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು.
ಮೂರು ದಿನಗಳ “ಇಂಡಿಯಾ ಕೆಮ್-2021” ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮ್ಮೇಳನ ಉದ್ಘಾಟಿಸಿ ಕೇಂದ್ರ ಸಚಿವ ಸದನದ ಗೌಡ ಮಾತನಾಡಿದರು. ಕೇಂದ್ರ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (ಎಫ್.ಐ.ಸಿ.ಸಿ.ಐ) ಜಂಟಿಯಾಗಿ ದ್ವೈವಾರ್ಷಿಕ ಬಂಡವಾಳ ಹೂಡಿಕೆ ಸಮಾವೇಶವನ್ನು ಸಂಘಟಿಸಿವೆ. “ಜಾಗತಿಕ ರಾಸಾಯನಿಕ & ಪೆಟ್ರೋಕೆಮಿಕಲ್ಸ್ ಉತ್ಪಾದನಾ ಕೇಂದ್ರವಾಗಿ ಭಾರತ” ಎಂಬುದು ಈ ಸಲದ ಸಮಾವೇಶದ ಥೀಮ್ ಎಂದು ತಿಳಿಸಿದರು.
ಇದು 11ನೇ ಸಮಾವೇಶವಾಗಿದ್ದು ಸ್ವದೇಶಿ ಕೈಗಾರಿಕೆಗಳನ್ನು ಉತ್ತೇಜಿಸಬೇಕು ಎಂಬ ಕಾರಣಾಕ್ಕಾಗಿ ಈ ವರ್ಷದ ಆಯವ್ಯಯದಲ್ಲಿ ಸುಮಾರು 1.97 ಲಕ್ಷ ಕೋಟಿ ರೂಪಾಯಿ ಉತ್ಪಾದನಾ ಆಧಾರಿತ ಧನಸಹಾಯ (ಪಿಎಲ್ಐ) ಯೋಜನೆಗಳನ್ನು ಘೋಷಿಸಲಾಗಿದೆ. ಈ ಪೈಕಿ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ವಲಯವು ಸಿಂಹಪಾಲು ಪಡೆದಿದೆ. ಈ ವಲಯದಲ್ಲಿ 2025ರ ವೇಳೆಗೆ 10 ಲಕ್ಷ ಕೋಟಿ ರೂವರೆಗೆ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಇದು ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವುದರ ಜೊತೆಗೇ ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಮಾಡಲಿದೆ ಎಂದು ಸಚಿವ ಸದಾನಂದ ಗೌಡ ಹೇಳಿದರು.
2025ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ರೂಪಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ಎಲ್ಲ ವಲಯವನ್ನೂ ಸ್ವಾವಲಂಬಿಯಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಕೇಂದ್ರ ಸರ್ಕಾರದ ಧ್ಯೇಯವಾಗಿದೆ. ಇದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ನಮ್ಮದು ಸುಸ್ಥಿರ ಸರ್ಕಾರವಾಗಿರುವುದರಿಂದ ಆರ್ಥಿಕ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳಲ್ಲೂ ಅನೇಕ ರಚನಾತ್ಮಕ ಸುಧಾರಣೆಗಳನ್ನು ತರಲು ಸಾಧ್ಯವಾಗುತ್ತಿದೆ. ಸ್ವದೇಶಿ ಕೈಗಾರಿಕೆಗಳು ವಿಶ್ವಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಶಕ್ತಿ ಹೊಂದಿರಬೇಕು ಎಂಬ ದೃಷ್ಟಿಯಿಂದ ರಫ್ತು ಆಮದು ಸುಂಕ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ ತರಲಾಗಿದೆ ಎಂದು ವಿವರಿಸಿದರು.
ಕೊರೊನಾ ನಂತರದ ಜಗತ್ತು ಚೀನಾಕ್ಕೆ ಬದಲಿ ವ್ಯವಸ್ಥೆಯಾಗಿ ಭಾರತದತ್ತ ಆಶಾಭಾವದಿಂದ ನೋಡುತ್ತಿದೆ. ಭೌಗೋಳಿಕವಾಗಿಯೂ ಆಯಕಟ್ಟಿನ ಸ್ಥಳದಲ್ಲಿರುವ ಭಾರತವು ಜಾಗತಿಕ ಸರಬರಾಜು ಸರಪಣಿಯಲ್ಲಿ ಮಹತ್ತರ ಪಾತ್ರವಹಿಸುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಅವಕಾಶವನ್ನು ಬಳಸಿಕೊಂಡು ಸ್ವದೇಶಿ ಕೈಗಾರಿಕೆಗಳು ಬೆಳೆಯಬೇಕು ಎಂದು ಸಚಿವ ಡಿ.ವಿ.ಎಸ್ ಕರೆ ನೀಡಿದರು.
2000ನೇ ಇಸ್ವಿಯಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಮಟ್ಟದ ರಾಸಾಯನಿಕ ಹಾಗೂ ಪೆಟ್ರೋಕೆಮಿಕಲ್ಸ್ ಸಮಾವೇಶಕ್ಕೆ ಚಾಲನೆ ನೀಡಿದ್ದರು. ಇಂಥ ಸಮಾವೇಶಗಳು ಬಂಡವಾಳ ಹೂಡಿಕೆ, ತಂತ್ರಜ್ಞಾನ ವರ್ಗಾವಣೆ, ಆವಿಷ್ಕಾರಗಳಿಗೆ ನೆರವಾಗುತ್ತಿದೆ. ಈ ಸಲವೂ ಕೈಗಾರಿಕೋದ್ಯಮಿಗಳು, ತಂತ್ರಜ್ಞರು ಹಾಗೂ ಬಂಡವಾಳ ಹೂಡಿಕೆದಾರರಿಂದ ಅತ್ಯುತ್ತಮ ಸ್ಪಂದನೆ ದೊರೆತಿದೆ ಎಂದು ಸದಾನಂದ ಗೌಡ ಹೇಳಿದರು.
ರಾಸಾಯನಿಕ ಹಾಗೂ ರಸಗೊಬ್ಬರ ಖಾತ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ, ಆಂಧ್ರಪ್ರದೇಶ ಕೈಗಾರಿಕಾ ಸಚಿವ ಎಂ ಗೌತಮ್ ರೆಡ್ಡಿ, ಓರಿಸ್ಸಾ ಕೈಗಾರಿಕಾ ಸಚಿವ ಕ್ಯಾಪ್ಟನ್ ದಿಬ್ಯಶಂಕರ್ ಮಿಶ್ರಾ, ಫಿಕ್ಕಿ ಅಧ್ಯಕ್ಷ ಪ್ರಭ್ ದಾಸ್, ಇಲಾಖಾ ಕಾರ್ಯದರ್ಶಿ ಯೋಗೇಂದ್ರ ತ್ರಿಪಾಠಿ, ಕೈಗಾರಿಕೋದ್ಯಮಿಗಳಾದ ದೀಪಕ್ ಸಿ ಮೆಹ್ತಾ, ಭವೇಶ್ ಪಟೇಲ್ ಮುಂತಾದವರು ಪಾಲ್ಗೊಂಡರು.