ಬೆಂಗಳೂರು: ಜಿಲ್ಲಾದ್ಯಂತ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 15 ರವರೆಗೆ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ದೇವನಹಳ್ಳಿ ಪಟ್ಟಣದಲ್ಲಿರುವ ಡಾ|ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2020ರ ಜನವರಿ 01 ಕ್ಕೆ 18 ವರ್ಷ ತುಂಬುವ ಎಲ್ಲಾ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಂಡು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಲಾಭ ಪಡೆದುಕೊಳ್ಳಬೇಕು. ನಾಗರಿಕರು ಆಯಾ ತಾಲ್ಲೂಕುಗಳಲ್ಲಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಮತದಾರರ ನೋಂದಣಿ ಅಧಿಕಾರಿಗಳ ಕಛೇರಿಯ ಮತದಾರರ ಪೂರಕ ಕೇಂದ್ರ, ಕರ್ನಾಟಕ ಒನ್, ಅಟಲ್ ಜನ ಸ್ನೇಹಿ ಕೇಂದ್ರ, ಗ್ರಾಮ ಪಂಚಾಯತಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರ, ಅಥವಾ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ, ಪರಿಶೀಲನೆ ಮತ್ತು ದೃಢೀಕರಣ ಹಾಗೂ ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಮತದಾನ ಪರಿಷ್ಕರಣೆಗೆ ಭಾರತೀಯ ಪಾಸ್‍ಪೋರ್ಟ್, ಚಾಲನಾ ಪರವಾನಿಗೆ, ಆಧಾರ ಪತ್ರ, ಪಡಿತರ ಚೀಟಿ, ಸರ್ಕಾರಿ/ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್‍ಬುಕ್, ರೈತರ ಗುರುತಿನ ಚೀಟಿ, ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ಇತರ ದಾಖಲೆಗಳ ವಿವರವನ್ನು ನಾಗರೀಕರು ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆಯಲ್ಲಿ ನೀಡಬೇಕು. ಮತದಾರರ ಸಹಾಯವಾಣಿ 1950 ಅನ್ನು ಸಂಪರ್ಕಿಸುವ ಮೂಲಕ ಮತದಾರರ ಪಟ್ಟಿಯನ್ನು ಪರಿಶೀಲಿಸಿ ದೃಢೀಕರಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020 ಮಾಹಿತಿ ಕುರಿತ ಭಿತ್ತಿಪತ್ರಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಅನಾವರಣಗೊಳಿಸಿದರು. ಇದೇ ವೇಳೆ ದೇವನಹಳ್ಳಿ ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಿಂದ ಅಂಬೇಡ್ಕರ್ ಭವನದವರೆಗೂ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಮತದಾರರ ಪಟ್ಟಿ ಪರಿಶೀಲನೆ ಕಾರ್ಯಕ್ರಮ ಕುರಿತ ಮಾಹಿತಿವುಳ್ಳ ಫಲಕ ಹಿಡಿದು ದೇವನಹಳ್ಳಿ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಿದರು.