ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಸಚಿವ ಜಮೀರ್ ಅಹಮದ್ ಹೊಸಕೋಟೆಯಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಬೈಲನರಸಾಪುರದಲ್ಲಿ ಬೈಕ್ ರ‍್ಯಾಲಿ ಮಾಡುವ ಮೂಲಕ ಪ್ರಚಾರ ನಡೆಸಿದ ಬಳಿಕ ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಕೂಡ ಭಾಗವಹಿಸಿದ್ರು. ಇನ್ನು ಸಚಿವ ಎಂಟಿಬಿ ನಾಗರಾಜ್ ಜಮೀರ್ ಅವರಿಗೆ ಸಾಥ್ ನೀಡಿದರು. ಹಾಗೂ ಸಾವಿರಾರು ಮುಸ್ಲಿಂ ಸಮುದಾಯದ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿದ್ದರು.
ದೇಶದ ಉಳಿವು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ, ರಾಹುಲ್ ಗಾಂಧಿ ಪ್ರಧಾನಿಯಾದರೆ ದೇಶವನ್ನು ಉಳಿಸುತ್ತಾರೆ. ಆದ್ದರಿಂದ ಎಲ್ಲರೂ ಕಾಂಗ್ರೆಸ್ಗೆ ಮತ ಚಲಾಯಿಸಿ ಎಂದು ಜಮೀರ್ ಮನವಿ ಮಾಡಿದರು. ಒಂದೇ ಒಂದು ಮತವನ್ನ ಬಿಜೆಪಿಯವರಿಗೆ ಹಾಕಬೇಡಿ, ಹಾಗೆ ಮುಸ್ಲಿಂ ಸಮುದಾಯದವರು ಕೂಡ ಯಾರು ನನ್ನ ನೋಡಿ, ಸಿದ್ದರಾಮಯ್ಯ , ಎಮ್ಟಿಬಿ ನಾಗರಾಜ್, ರಾಹುಲ್ ಗಾಂಧಿಯವರನ್ನ ನೋಡಿ ಮತ ಹಾಕಬೇಡಿ. ದೇಶದಲ್ಲಿ ಯಾರು ಶಾಂತಿ ನೆಮ್ಮದಿಯ ಜೀವನ ನಡೆಸಲು ಸಹಕಾರ ಮಾಡುತ್ತಾರೋ ಅಂತಹ ಸರ್ಕಾರಕ್ಕೆ ಮತ ಹಾಕಿ ಗೆಲ್ಲಿಸಿ ಎಂದರು.
ಕಾರ್ಯಕ್ರಮ ನಂತರ ಮಾಧ್ಯಮವರ ಜೊತೆ ಸಚಿವ ಜಮೀರ್ ಮಾತನಾಡಿ, ಪ್ರಧಾನಮಂತ್ರಿ ಮೋದಿ ಮುಖ ನೋಡೋಕೆ ಆಗದೆ ಹೆಂಡತಿನೇ ಬಿಟ್ಟು ಹೋಗಿದ್ದಾಳೆ. ಇನ್ನು ಅಭಿವೃದ್ಧಿ ಮಾಡದ ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖ ನೋಡಿ ಮತ ಹಾಕಿ ಅಂತ ಕೇಳುತ್ತಿದ್ದಾರೆ ಎಂಥಹ ಪರಿಸ್ಥಿತಿ ಬಂದಿದೆ. ಇನ್ನೂ ಮುಂದೆ ಬಿಜೆಪಿಯವರು ಬುರ್ಕ ಹಾಕಿಕೊಂಡು ಮತ ಕೇಳೊದು ಒಳ್ಳೆಯದು ಎಂದರು.
ರಾಮಮಂದಿರ ಕಟ್ಟೋದಕ್ಕೆ ಮುಸ್ಲಿಂ ಸಮುದಾಯದಿಂದ ಯಾವುದೇ ಅಡ್ಡಿ ಇಲ್ಲ, ರಾಮಮಂದಿರನೂ ಕಟ್ಟಲಿ ಪಕ್ಕದಲ್ಲಿ ಮಸೀದಿನೂ ಕಟ್ಟಲಿ, ಅವರಿಂದ ಆಗಲಿಲ್ಲ ಎಂದರೆ ನಾವು ಮುಸ್ಲಿಂ ಸಮುದಾಯದವರು ರಾಮ ಮಂದಿರವನ್ನು ಕಟ್ಟುತ್ತೇವೆ ಎಂದರು. ಚುನಾವಣೆ ಬಂದಾಗ ಮಾತ್ರ ರಾಮ ಮಂದಿರ ನೆನಪಾಗುತ್ತದೆ, ಕಳೆದ ಐದು ವರ್ಷಗಳ ಕಾಲ ಬಿಜೆಪಿಯವರೆ ಅಧಿಕಾರಲ್ಲಿ ಇದ್ದದ್ದು ಆಗ ನೆನಪಾಗಿಲ್ವಾ ಎಂದು ಕೇಳಿದರು.