ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬಯಿಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ಸಂಸ್ಥೆಯ ವಿಮಾನ ತಾಂತ್ರಿಕ ದೋಷದಿಂದ ಸುಮಾರು 14 ಗಂಟೆ ತಡವಾಗಿದ್ದರಿಂದ ಪ್ರಯಾಣಿಕರು ಕೋಪಗೊಂಡು ಸ್ಪೈಸ್ ಜೆಟ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕ ದೋಷದ ಕಾರಣದಿಂದ ವಿಮಾನ ಸೇವೆ ತಡವಾಗಿದ್ದಲ್ಲದೇ, ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡದೇ ಇದ್ದದ್ದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸುಮಾರು 200ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಸಿಬ್ಬಂದಿ ವಿರುದ್ದ ವಾಗ್ವಾದಕ್ಕೆ ಇಳಿದರು. ಬುಧವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಮುಂಬೈಗೆ ಹೋಗಬೇಕಿದ್ದ ವಿಮಾನ, ತಾಂತ್ರಿಕ ಕಾರಣದಿಂದ 2 ಗಂಟೆ ತಡವಾಗಿ ಹೋಗುವುದಾಗಿ ಸ್ಪೈಸ್ ಜೆಟ್ ಸಿಬ್ಬಂದಿ ಹೇಳಿದ್ದಾರೆ. ಎರಡು ಗಂಟೆಗಳ ಕಾಲ ವಿಮಾನದಲ್ಲೇ ಸಮಯ ಕಳೆದ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಲಾಗಿದೆ.
ಪ್ರಯಾಣಿಕರು ಬೋರ್ಡಿಂಗ್ ಕೌಂಟರ್‌ಗೆ ಹಿಂತಿರುಗಿದ ನಂತರ, ಸ್ಪೈಸ್ ಜೆಟ್ ಸಿಬ್ಬಂದಿ ಮಧ್ಯಾಹ್ನ 12 ಗಂಟೆಗೆ ಪ್ರಯಾಣದ ಸಮಯವನ್ನು ಮರು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅನಂತರ ಪ್ರಯಾಣವನ್ನು ಮತ್ತೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಪ್ರಯಾಣಿಕರು ಸ್ಪೈಸ್ ಜೆಟ್ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಬಳಿಕವೂ ವಿಮಾನ ಹಾರಾಟ ನಡೆಸಲು ಸಾಧ್ಯವಾಗಿಲ್ಲ. ಅಂತಿಮವಾಗಿ ರಾತ್ರಿ 8:30ಕ್ಕೆ ವಿಮಾನ ಮುಂಬೈಗೆ ಹಾರಿದೆ.
ಈ ಬಗ್ಗೆ ಕೆಲವು ಪ್ರಯಾಣಿಕರು ಎಕ್ಸ್ ಆ್ಯಪ್ ಮೂಲಕ ತಮಗಾದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ. ಪ್ರಯಾಣಿಕರ ಪ್ರತಿಭಟನೆ ಹಾಗೂ ಆಕ್ರೋಶದ ಬಗ್ಗೆ ಸ್ಪೈಸ್ ಜೆಟ್ ಸಂಸ್ಥೆ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ಇದಕ್ಕೆ ವಿಷಾದಿಸುತ್ತೇವೆ ಎಂದು ಹೇಳಿದೆ ಎಂದು ತಿಳಿದು ಬಂದಿದೆ. ಅಧಿಕೃತವಾದ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಕಾರು - ಟಿಪ್ಪರ್ ನಡುವೆ ಭೀಕರ ರಸ್ತೆ ಅಪಘಾತ.. ಇಬ್ಬರು ಸಜೀವ ದಹನ
ಹಿಂದಿನ ಸುದ್ದಿ:
ಶಿವಮೊಗ್ಗದಲ್ಲೂ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದ ತಡವಾಗಿ ಹಾರಾಟ ವಿಳಂಬವಾಗಿದ್ದ ಘಟನೆ ನವೆಂಬರ್ 1 ರಂದು ನಡೆದಿತ್ತು. ಈ ವಿಮಾನದಲ್ಲಿ 50 ಜನ ಪ್ರಯಾಣಿಕರು ಇದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡಬೇಕಿತ್ತು. ಇಲ್ಲಿ ವಿಮಾನ ಹಾರಾಟ ವಿಳಂಬವಾಗಿರುವುದರಿಂದ ಪ್ರಯಾಣಿಕರಿಗೆ ವಿಮಾನ ಸಂಸ್ಥೆಯು ಊಟದ ವ್ಯವಸ್ಥೆಯನ್ನು ಮಾಡಿತ್ತು. ಬಳಿಕ ಪರಿಣಿತರು ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿದ್ದರು.