ದೊಡ್ಡಬಳ್ಳಾಪುರ : ಎರಡು ಖಾಸಗಿ ಶಾಲೆಗಳ ನಡುವಿನ ವೈರತ್ವ ಸುಪಾರಿ ಕೊಲೆಗೆ ಸಂಚಿಗೆ ಕಾರಣವಾಗಿದೆ. 15 ಲಕ್ಷ ರೂ. ಪಡೆದು ವೈರಿ ಶಾಲೆಯ ಕಾರ್ಯದರ್ಶಿಯನ್ನ ಕೊಲ್ಲಲು ಯತ್ನಿಸಿದ ಸುಪಾರಿ ಕಿಲ್ಲರ್ಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ ಹಿನ್ನೆಲೆ ಏನು?
ಕಳೆದ ಮೇ 16ರಂದು ಬೆಳಗ್ಗೆ ಹೆಸರಘಟ್ಟದ ಹೆಚ್ಎಸ್ಎಲ್ಎನ್ ಶಾಲೆಯ ಕಾರ್ಯದರ್ಶಿ ನಾಗೇಶ್ವರ ರಾವ್ ಗೌರಿಬಿದನೂರಿನಿಂದ ಹೆಸರಘಟ್ಟದ ತಮ್ಮ ಶಾಲೆಗೆ ಕಾರಿನಲ್ಲಿ ಬರುತ್ತಿದ್ದರು. ಆಗ ಮಧುರೆ ರಾಜನುಕುಂಟೆ ರಸ್ತೆಯ ಕುಂಬಳಕುಂಟೆ ಜುನ್ನಸಂದ್ರದ ಬಳಿ ಅವರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕಾರಿಗೆ ಡಿಕ್ಕಿ ಹೊಡೆದು ಅಡ್ಡಗಟ್ಟಿದ್ದಾರೆ. ಅಲ್ಲದೆ ನಾಗೇಶ್ವರ ಕಾರಿನಿಂದ ಇಳಿದ ತಕ್ಷಣ ಮತ್ತೊಂದು ಕಾರಿನಲ್ಲಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ನಾಗೇಶ್ವರ ರಾವ್ ಸತ್ತರೆಂದು ತಿಳಿದು ಪರಾರಿಯಾಗಿದ್ದರು. ಇನ್ನು ತಲೆ, ಕೈ, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ನಾಗೇಶ್ವರ ಅವರನ್ನು ತಕ್ಷಣ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಆಸ್ಪತ್ರೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ನಾಗೇಶ್ವರ ರಾವ್ ಯಾರು?:
ನಾಗೇಶ್ವರ ರಾವ್ ಅವರು ಸೌದಿ ಅರೆಬಿಯಾದ ಕತಾರ್ ಮತ್ತು ದೋಹಾದಲ್ಲಿ ಐದು ವರ್ಷ ಶಿಕ್ಷಕ ವೃತ್ತಿಯನ್ನು ಮಾಡಿದ್ದವರು, ಅವರು ಭಾರತಕ್ಕೆ ಬಂದಾಗ ಬೆಂಗಳೂರಿನ ಹೊರವಲಯದಲ್ಲಿರುವ ಹೆಸರಘಟ್ಟ ಬಳಿಯ ತಮ್ಮೇನಹಳ್ಳಿ ಆರ್ಸಿ ಇಂಟರ್ ನ್ಯಾಷನಲ್ ಮಾಲೀಕ ರಾಮಚಂದ್ರರೆಡ್ಡಿಯವರು ತಮ್ಮ ಶಾಲೆಗೆ ಬರುವಂತೆ ಆಹ್ವಾನ ನೀಡಿದರು. ಬಳಿಕ ನಾಗೇಶ್ವರ ರಾವ್ ಆರ್ಸಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪ್ರಿನ್ಸಿಪಾಲರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತಮ್ಮ ವೃತ್ತಿ ನೈಪುಣ್ಯತೆ ಬಳಸಿ 40 ಮಕ್ಕಳಿದ್ದ ಶಾಲೆಯನ್ನು ಮೂರೇ ತಿಂಗಳಲ್ಲಿ 120 ಮಕ್ಕಳು ಶಾಲೆ ಸೇರುವಂತೆ ಮಾಡುತ್ತಾರೆ. ಈ ನಡುವೆ ಸ್ವಪ್ನಾ ಎಂಬುವರು ಶಾಲಾ ಕಾರ್ಯದರ್ಶಿಯಾಗಿ ಬರುತ್ತಾರೆ. ಶಾಲಾ ಕಾರ್ಯದರ್ಶಿ ಸ್ವಪ್ನಾ ಅವರು ನಾಗೇಶ್ವರ ಕೆಲಸದಲ್ಲಿ ಮೂಗುತೂರಿಸುವ ಕೆಲಸ ಮಾಡುತ್ತಾರೆ. ಇದರಿಂದ ಬೇಸರಗೊಂಡ ನಾಗೇಶ್ವರ ರಾವ್ ರಾಮಚಂದ್ರರೆಡ್ಡಿ ಶಾಲೆ ಬಿಟ್ಟು ಹೆಸರಘಟ್ಟ ಮತ್ತು ಗೌರಿಬಿದನೂರಿನಲ್ಲಿ ಹೆಚ್ಎಸ್ಎಲ್ಎಲ್ ಶಾಲೆ ತೆರೆಯುತ್ತಾರೆ.
ನಾಗೇಶ್ವರ ಹತ್ಯೆಗೆ 15 ಲಕ್ಷ ಸುಪಾರಿ:
ಹೀಗೆ ವಿದೇಶದಲ್ಲಿ ಸಾಕಷ್ಟು ನೈಪುಣ್ಯತೆ ಪಡೆದಿದ್ದ ನಾಗೇಶ್ವರ ರಾವ್ ಹೆಚ್ಎಸ್ಎಲ್ಎಲ್ ಶಾಲೆ ಪ್ರಾರಂಭಿಸಿದ ಒಂದೇ ವರ್ಷದಲ್ಲಿ 300 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಇತ್ತ ರಾಮಚಂದ್ರರೆಡ್ಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತೆ. ರಾಮಚಂದ್ರಶೆಟ್ಟಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದ ಪೋಷಕರು ನಾಗೇಶ್ವರ ರಾವ್ ಅವರ ಶಾಲೆಗೆ ಸೇರಿಸಲು ಶುರುಮಾಡುತ್ತಾರೆ. ಇದು ರಾಮಚಂದ್ರಶೆಟ್ಟಿಯವರ ದ್ವೇಷಕ್ಕೆ ಕಾರಣವಾಗುತ್ತದೆ. ಬಳಿಕ ಸ್ನೇಹಿತ ವೆಂಕಟೇಶ್ ಮೂಲಕ ಸುಪಾರಿ ಹಂತಕರನ್ನು ಭೇಟಿಯಾಗುವ ರಾಮಚಂದ್ರರೆಡ್ಡಿ 15 ಲಕ್ಷ ರೂ.ಗೆ ಡೀಲ್ ಮಾಡಿಕೊಳ್ಳುತ್ತಾರೆ.
ಸುಪಾರಿ ಕಿಲ್ಲರ್ಸ್ ಅರೆಸ್ಟ್:
ಇನ್ನು ಘಟನೆ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ತನಿಖೆಗೆ ಇಳಿದ ದೊಡ್ಡಬಳ್ಳಾಪುರ ಪೊಲೀಸರು ಯಾವುದೇ ಸುಳಿವು ನೀಡದೇ ಆರೋಪಿಗಳ ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಗಳ ಬೆನ್ನತ್ತಿದ್ದ ಪೊಲೀಸರು ಘಟನೆ ನಡೆದ ದಿನದ ಗೌರಿಬಿದನೂರಿನಿಂದ ಹೆಸರಘಟ್ಟಕ್ಕೆ ಬರುವ ಮಾರ್ಗದಲ್ಲಿನ ಸಿಸಿ ಕ್ಯಾಮರಾ ಪೂಟೇಜ್ ಪರಿಶೀಲನೆ ನಡೆಸಿದ್ದಾಗ ಎರಡು ಕಾರುಗಳು ಹಿಂಬಾಲಿಸುತ್ತಿರುವುದು ಗಮನಕ್ಕೆ ಬರುತ್ತದೆ. ಇದೇ ಆಧಾರದ ಮೇಲೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀನಿವಾಸಮೂರ್ತಿ ಅಲಿಯಾಸ್ ಸೀನ, ವೆಂಕಟೇಶ್, ಯೋಗೇಶ್, ನಾಗೇಶ್, ಆದರ್ಶ, ವೀರಭದ್ರ ಸೇರಿದಂತೆ ಆರು ಜನರನ್ನ ಬಂಧಿಸಲಾಗಿದೆ. ಸುಪಾರಿ ನೀಡಿದ ರಾಮಚಂದ್ರರೆಡ್ಡಿ ಮತ್ತು ಮೋಹನ್ ತಲೆಮರೆಸಿಕೊಂಡಿದ್ದಾರೆ.