ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಜಲಪ್ರಳಯದಿಂದ ಉಂಟಾದ ಅನಾಹುತಕ್ಕೆ ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದು, ಲಕ್ಷಾಂತರ ಮಂದಿ ನಿರ್ಗತಿಕರಾಗಿದ್ದಾರೆ. ಸಂತ್ರಸ್ತರ ನೆರೆವಿಗೆ ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ಅದಕ್ಕಾಗಿಯೇ ಜೀವನೆಲೆ ಚಾರಿಟೆಬಲ್ ಟ್ರಸ್ಟ್, ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿ ಅವರ ನೆರವಿಗೆ ನಿಂತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಜೀವನೆಲೆ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ 25 ಜೋಡಿ ಕುಸ್ತಿಪಟುಗಳು ತಮ್ಮ ಪಟ್ಟುಗಳನ್ನು ಪ್ರದರ್ಶಿದರು. ಕುಸ್ತಿ ಪಂದ್ಯಾವಳಿಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ನಿತೀನ್ ಪುರುಷೊತ್ತಮ್, ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ರವಿ ಪಂದ್ಯಾವಳಿಗೆ ಚಾಲನೆ ನೀಡಿದರು.
ಪಂದ್ಯಾವಳಿಯಲ್ಲಿ ಗೆದ್ದವರಿಗೆ ಗೌರವ ಸಹಾಯ ಧನದ ಜೊತೆ ಟ್ರೋಫಿ ವಿತರಿಸಲಾಯಿತು. ಇದೇ ವೇಳೆ ಮಾತನಾಡಿದ ದೇಹದಾರ್ಢ್ಯ ಪಟು ರವಿ, ದೇಶಿಯ ಕ್ರೀಡೆಗಳನ್ನ ಪ್ರೋತ್ಸಾಹಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ನಮ್ಮದೇ ಮಣ್ಣಿನ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಇನ್ನಷ್ಟು ಕ್ರೀಡಾಪಟುಗಳು ಸೃಷ್ಟಿಯಾಗಿ ರಾಜ್ಯ, ರಾಷ್ಟ್ರಕ್ಕೆ ಕೀರ್ತಿ ತರುತ್ತಾರೆ. ದೇಶಿಯ ಕ್ರೀಡೆಗಳನ್ನು ಪ್ರೋತ್ಸಾಹಿಸುವುದರ ಜೊತೆ ಪಂದ್ಯಾವಳಿಯನ್ನು ನೆರೆ ಸಂತ್ರಸ್ತರ ನೆರವಿಗಾಗಿ ನಡೆಸುತ್ತಿರುವ ಉದ್ದೇಶ ನಿಜಕ್ಕೂ ಮಾದರಿಯೇ ಸರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.