ನೆಲಮಂಗಲ(ಬೆಂ.ಗ್ರಾ): ತುಮಕೂರು ರಸ್ತೆಯ ಮಾದವಾರದ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ(ಬಿಐಇಸಿ) ಕೋವಿಡ್ ಕೇರ್ ಕೇಂದ್ರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು.
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ ಕೊರೊನಾ ಲಕ್ಷಣಗಳಿಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡಲು, ಬಿಬಿಎಂಪಿಯು ಬಿಐಇಸಿಯಲ್ಲಿ ರಾಜ್ಯದ ಅತಿ ದೊಡ್ಡ ಕೋವಿಡ್ ಕೇರ್ ಕೇಂದ್ರ ಸ್ಥಾಪನೆ ಮಾಡಿದೆ. 10,100 ಹಾಸಿಗೆ ಸಾಮಾರ್ಥ್ಯದ ಕೋವಿಡ್ ಕೇರ್ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ದುಪ್ಪಟ್ಟು ಹಣದಲ್ಲಿ ಚಿಕಿತ್ಸಾ ಪರಿಕರಗಳನ್ನು ಖರೀದಿ ಮಾಡಿದೆ. ಸರ್ಕಾರ ದುಂದು ವೆಚ್ಚ ಮಾಡಿದೆ ಎಂದು ಆರೋಪಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದರು. ಅಷ್ಟೇ ಅಲ್ಲ, ನಾಡಿದ್ದು ಅಂದ್ರೇ ಜುಲೈ 23ರಂದು ತಾವು ಮಾಡಿರೋ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೂ ಬಿಡುಗಡೆ ಮಾಡುವುದಾಗಿ ಈಗಾಗಲೇ ಗುಡುಗಿದ್ದಾರೆ.
ಇದೀಗ ಬಿಐಇಸಿಯ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿರುವ ಅವರು, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ್ದಾರೆ. ಸಿದ್ದರಾಮಯ್ಯ ಅವರ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಹೆಚ್ ಎಂ ರೇವಣ್ಣ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಸಹ ಈ ವೇಳೆ ಹಾಜರಿದ್ದರು.