ದೊಡ್ಡಬಳ್ಳಾಪುರ : ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 33 ಸಾವಿರ ರೂ. ಹಣ ಕಡಿತವಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ನಗರ ಠಾಣೆ ಪೊಲೀಸರಿಗೆ ಮಲ್ಲಿಕಾರ್ಜುನ್ ಎಂಬವರು ದೂರು ನೀಡಿದ್ದಾರೆ.
ದೊಡ್ಡಬಳ್ಳಾಪುರ ಹೊರವಲಯ ಮುಕ್ತಾಂಬಿಕಾ ಬಡಾವಣೆ ನಿವಾಸಿಯಾಗಿರುವ ಮಲ್ಲಿಕಾರ್ಜುನ್ ಮತ್ತು ಪುಷ್ಪ ದಂಪತಿ ಸಾವಿರಾರು ರೂ. ಕಳೆದುಕೊಂಡಿದ್ದಾರೆ. ನಗರದ ಚಿಕ್ಕಪೇಟೆ ಎಸ್ಬಿಐ ಬ್ಯಾಂಕ್ ಶಾಖೆಯಲ್ಲಿ ಮಲ್ಲಿಕಾರ್ಜುನ-ಪುಷ್ಪಾ ದಂಪತಿ ಖಾತೆಯನ್ನು ಹೊಂದಿದ್ದಾರೆ. ಸೆಪ್ಟೆಂಬರ್ 11ರಂದು ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆ ಆಗಿರುವ ಬಗ್ಗೆ ಮೊಬೈಲ್ಗೆ ಸಂದೇಶ ಬಂದಿತ್ತು.
ಹಣ ಬಂದಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಬ್ಯಾಂಕಿಗೆ ಹೋಗಿದ್ದರು. ಈ ವೇಳೆ ಖಾತೆಯನ್ನು ಪರಿಶೀಲಿಸಿದಾಗ ಹಣ ಜಮೆಯಾಗಿರಲಿಲ್ಲ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಕೆವೈಸಿ ಮಾಡಿಸುವಂತೆ ಹೇಳಿದ್ದರು. ಕೆವೈಸಿ ಮಾಡಿಸಿದ ಬಳಿಕ ಪುಷ್ಪಾ ಅವರ ಖಾತೆಯಿಂದ ಆಗಸ್ಟ್ 11ರಿಂದ 19ರ ವರೆಗೆ ಒಟ್ಟು 35,999 ರೂಪಾಯಿ ಕಡಿತವಾಗಿದೆಯಂತೆ. ಮತ್ತೆ ಖಾತೆಯಲ್ಲಿನ ಹಣ ಕಡಿತವಾಗಿರುವ ಬಗ್ಗೆ ವಿಚಾರಿಸಲು ದಂಪತಿ ಬ್ಯಾಂಕ್ ಬಂದಿದ್ದಾರೆ.
ಎರಡು ಖಾತೆಗಳಿಂದ ಹಣ ಕಡಿತ ಆರೋಪ : ಈ ಬಗ್ಗೆ ಪ್ರತಿಕ್ರಿಯಿಸಿರುವ ಹಣ ಕಳೆದುಕೊಂಡ ಮಲ್ಲಿಕಾರ್ಜುನ್, ಮೊದಲ ಬಾರಿಗೆ ಆಗಸ್ಟ್ 11ರಂದು 10 ಸಾವಿರ ಕಡಿತವಾಗಿದೆ. ಬಳಿಕ 13ರಂದು 1 ಸಾವಿರ ಕಡಿತವಾಗಿದೆ. ಹಾಗೆಯೇ 16ರಂದು 9999 ರೂ. ಕಡಿತವಾಗಿದೆ. 18ರಂದು 10 ಸಾವಿರ ಕಡಿತಗೊಂಡಿದೆ. 19ರಂದು 5 ಸಾವಿರ ಕಡಿತವಾಗಿದೆ. ಗೃಹ ಲಕ್ಷ್ಮೀ ಹಣ ಬಂದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಬ್ಯಾಂಕ್ಗೆ ತೆರಳಿದ್ದಾಗ ಖಾತೆಯಿಂದ ಹಣ ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ಯಾಂಕ್ನವರು ದೂರು ಸಲ್ಲಿಸುವಂತೆ ಹೇಳಿದರು. ಶುಕ್ರವಾರ ಮತ್ತೆ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ. ಇಲ್ಲಿಯವರೆಗೆ ಒಟ್ಟು ನನ್ನ ಖಾತೆಯಿಂದ 33 ಸಾವಿರ ರೂ ಕಡಿತಗೊಂಡಿದೆ ಎಂದು ಹೇಳಿದರು. ಒಟ್ಟು 69 ಸಾವಿರ ಕಳೆದುಕೊಂಡಿರುವುದಾಗಿ ಮಲ್ಲಿಕಾರ್ಜುನ್ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ವಕೀಲರಾದ ಪ್ರಕಾಶ್, ತಮ್ಮ ಖಾತೆಯಲ್ಲಿದ್ದ ಹಣ ಕಳೆದುಕೊಂಡಿರುವ ಬಗ್ಗೆ ಮಲ್ಲಿಕಾರ್ಜುನ್ ಅವರು ನಮ್ಮಲ್ಲಿ ಬಂದು ಹೇಳಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಇವರ ಮೊಬೈಲಿಗೆ ಗೃಹಲಕ್ಷ್ಮೀ ಯೋಜನೆಯಲ್ಲಿ ಹಣ ಬಂದಿರುವುದಾಗಿ ಸಂದೇಶ ಬಂದಿರುತ್ತದೆ. ಈ ಬಗ್ಗೆ ವಿಚಾರಿಸಲು ದೂರುದಾರರು ಬ್ಯಾಂಕಿಗೆ ಹೋಗಿದ್ದರು. ಈ ವೇಳೆ ಬ್ಯಾಂಕ್ನಲ್ಲಿ ಕೆವೈಸಿ ಮಾಡಿಸಿದ್ದಾರೆ. ಬಳಿಕ ಸತತವಾಗಿ ನಾಲ್ಕು ಖಾತೆಯಿಂದ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಬ್ಯಾಂಕ್ನಲ್ಲಿ ವಿಚಾರಿಸಿದಾಗ ದೂರು ನೀಡಲು ಹೇಳಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ದಂಪತಿಗಳಿಗೆ ಒಟ್ಟು 69 ಸಾವಿರ ರೂ. ನಷ್ಟವಾಗಿದೆ. ಇವರಿಗೆ ನ್ಯಾಯ ಸಿಕ್ಕಿಲ್ಲ, ಬೇಗ ನಮ್ಮ ದೂರುದಾರರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ : ಮುಂಬೈ: ಮಹದೇವ್ ಆನ್ಲೈನ್ ಬೆಟ್ಟಿಂಗ್ ಪ್ರಕರಣ; ₹417 ಕೋಟಿ ಮೌಲ್ಯದ ಸಂಪತ್ತು ಜಪ್ತಿ