ನೆಲಮಂಗಲ : ರಾಜ್ಯದಲ್ಲೇ ಪ್ರಥಮ ಬಾರಿಗೆ ಲಾರಿಗಳ ಮುಖಾಂತರ ಸರಕು ಸೇವೆಗಳನ್ನು ಸಾಗಿಸುವ ರೋ ರೋ ರೈಲ್ವೆ ಯೋಜನೆಗೆ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಗೃಹ ಕಚೇರಿ ಕೃಷ್ಣಾದಿಂದಲೇ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರೈಲ್ವೆ ನಿಲ್ದಾಣದಲ್ಲಿ ಇಂದು ನೈರುತ್ಯ ರೈಲ್ವೆ ಯೋಜನೆ ಲೋರ್ಕಾಪಣೆಗೊಂಡಿದೆ. ಇಂದಿನಿಂದ ರಾಜ್ಯದಿಂದ ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಬೇಲ್ ರೈಲ್ವೆ ನಿಲ್ದಾಣಕ್ಕೆ ಮಧ್ಯೆ ಮೊದಲ ರೋಲ್ ಆನ್ ರೋಲ್(ರೋ-ರೋ/RO-RO) ಸೇವೆ ಆರಂಭವಾಯಿತು.
ಮಧುವಣ ಗಿತ್ತಿಯಂತೆ ಸಿಂಗಾರಗೊಂಡ ರೈಲಿಗೆ ಹಸಿರು ನಿಶಾನೆ ತೋರುತ್ತಿದ್ದಂತೆ ಚಾಲನೆಗೊಂಡಿತು. ಅಂದಾಜು 27 ಸಾವಿರ ಒಂದು ಲಾರಿಗೆ ವೆಚ್ಚ ತಗುಲಿದ್ದು, 52 ಲಾರಿಗಳವರೆಗೆ ರೈಲಿನಲ್ಲಿ ಸಾಗಿಸಬಹುದಾಗಿದೆ. ಲಾರಿಗಳಲ್ಲಿ ಲೋಡ್ ಮಾಡಿ, ರೈಲುಗಳಲ್ಲಿ ಹೊತ್ತೊಯ್ದು ನಿಗದಿತ ನಿಲ್ದಾಣಗಳಲ್ಲಿ ಲಾರಿಗಳನ್ನು ರೈಲಿನಿಂದ ಕೆಳಗಿಳಿಸಿ ನೇರವಾಗಿ ಸರಕುಗಳನ್ನು ಮಾಲೀಕರ ಸ್ಥಳಗಳಿಗೆ ತಲುಪಿಸುವುದೇ ಈ ರೋ-ರೋ ಸೇವೆಯ ಉದ್ದೇಶವಾಗಿದೆ.
ಇದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ. ಪ್ರಯಾಣದ ಅವಧಿ ಕೂಡ ಕಡಿತಗೊಳ್ಳುತ್ತದೆ. ಮುಖ್ಯವಾಗಿ ಕಳ್ಳತನವಾಗುವುದು ತಪ್ಪುತ್ತದೆ. ವಿಶೇಷ ಅಂದರೆ ರೋ-ರೋ ಸೇವೆ ದೇಶದ ಹಲವು ಕಡೆಗಳಲ್ಲಿ ಲಭ್ಯವಿದೆ. ಆದರೆ, ಮೊದಲ ಬಾರಿಗೆ ಸೌತ್ ವೆಸ್ಟರ್ನ್ ರೈಲ್ವೆ (ಎಸ್‌ಡಬ್ಲ್ಯುಆರ್)ನಲ್ಲಿ ಇಂದಿನಿಂದ ಆರಂಭವಾಗಲಿದೆ. ಸೌತ್ ವೆಸ್ಟರ್ನ್ ರೈಲ್ವೆ(SWR) ಮೊದಲ ಬಾರಿಗೆ ಸೇವೆ ಸಲ್ಲಿಸಲಿದ್ದು, "ಕೃಷಿ ಉಪಕರಣಗಳು, ರಾಸಾಯನಿಕ ಮತ್ತು ಕೈಗಾರಿಕಾ ವಸ್ತುಗಳನ್ನು ಒಳಗೊಂಡ ಒಟ್ಟು 1260 ಟನ್ಗಳನ್ನು ಮೊದಲ ಓಟದಲ್ಲಿ ಲೋಡ್ಗಳನ್ನು ಕೊಂಡೊಯ್ಯಲಿದೆ" ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ನೆಲಮಂಗಲ ಮತ್ತು ಬೇಲ್ ನಡುವೆ 682 ಕಿ.ಮೀ ದೂರದಲ್ಲಿ ಚಲಿಸುತ್ತದೆ. ಮೂರು ರೈಲ್ವೆ ವಲಯಗಳನ್ನು ಒಳಗೊಂಡಿದೆ. ಈ ರೀತಿಯ ಸೇವೆ ಕೊಂಕಣ ರೈಲ್ವೆಯಲ್ಲಿ ಮಾತ್ರ ಕಾಣುತ್ತಿದ್ದೆವು. ಈಗ ನೈರುತ್ಯ ರೈಲ್ವೆಗೂ ಕಾಲಿಟ್ಟಿರುವುದು ಸಂತಸ ತಂದಿದೆ. ನೆಲಮಂಗಲ ಭಾಗದಲ್ಲಿ ಅತೀ ಹೆಚ್ಚು ಕೈಗಾರಿಕೆಗಳು ಇರುವುದರಿಂದ ಈ ಸೇವೆ ಸಹಾಯಕವಾಗಲಿದೆ. ರಸ್ತೆ ಸಂಚಾರ ಕಡಿಮೆ ಮಾಡುವುದು ಮತ್ತು ಕಡಿಮೆ ಇಂಧನ ಬಳಕೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶ ಎಂದು ನೈರುತ್ಯ ರೈಲ್ವೆಯ ಡಿಆರ್‌ಒ ಮಾಧ್ಯಮಗಳಿಗೆ ತಿಳಿಸಿದರು.
ರೋ ರೋ ರೈಲು ವಿಶೇಷತೆ : ಒಟ್ಟು 43 ತೆರೆದ ವ್ಯಾಗನ್‌ಗಳನ್ನು ಹೊಂದಿದ್ದು, ಇದು ವಾಹನದ ಗಾತ್ರವನ್ನು ಅವಲಂಭಿಸಿ 43 ಅಥವಾ ಹೆಚ್ಚಿನ ಟ್ರಕ್‌ಗಳನ್ನು ಸಾಗಿಸಬಲ್ಲದು. ಇದು ನೆಲಮಂಗಲ ಮತ್ತು ಬೇಲ್ ನಡುವೆ 682 ಕಿ.ಮೀ ದೂರದಲ್ಲಿ ಚಲಿಸುತ್ತದೆ. ಮೂರು ರೈಲ್ವೆ ವಲಯಗಳಾದ ಸೆಂಟ್ರಲ್ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ ಮತ್ತು ಎಸ್‌ಡಬ್ಲ್ಯುಆರ್ ಮೂಲಕ ಹಾದು ಹೋಗಲಿದೆ. ಪ್ರತಿ ಸುತ್ತಿನ ರೋ-ರೋ ಸಂಚಾರವೂ ಆರು ದಿನಗಳನ್ನು ತೆಗೆದುಕೊಳ್ಳುತ್ತದೆ. ಸರಕು ಸಾಗಣೆ ಶುಲ್ಕಗಳು ಪ್ರತಿ ಟನ್‌ಗೆ 2700 ರೂಪಾಯಿಗಳು ತಗಲುತ್ತದೆ. ಪ್ರತಿ ಟ್ರಕ್‌ಗೆ ಒಟ್ಟು 30 ಟನ್‌ಗಳಷ್ಟು ಸಾಮರ್ಥ್ಯವಿದೆ. ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯು ಟ್ರಕ್‌ನೊಂದಿಗೆ ರೈಲಿನಲ್ಲಿ ಹೋಗಬಹುದು. ಅವರು ಪ್ರಯಾಣಕ್ಕಾಗಿ ಎರಡನೇ ದರ್ಜೆಯ ಟಿಕೇಟ್‌ಗಳನ್ನು ಖರೀದಿಸಬೇಕು.