ದೊಡ್ಡಬಳ್ಳಾಪುರ: ನಗರದ ಚಿಕ್ಕಪೇಟೆಯಲ್ಲಿ ವ್ಯಕ್ತಿಯೊಬ್ಬನನ್ನು ಉಗ್ರಗಾಮಿ ಚಟುವಟಿಕೆ ಹಿನ್ನೆಲೆ ಎನ್ಐಎ ಬಂಧಿಸಿದ್ದು, ನಗರದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ನಾಗರಿಕರಲ್ಲಿ ಅಸುರಕ್ಷತೆಯ ಭಾವನೆ ಮೂಡಿತ್ತು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ದಿನಾಂಕ 25-06-2019ರಂದು ನಗರದ ಚಿಕ್ಕಪೇಟೆ ಮಸೀದಿಯಲ್ಲಿ ‘ಜಮಾತ್-ಉಲ್-ಮುಜಾಹಿದ್ದೀನ್’ ಎಂಬ ಸಂಘಟನೆಯ ಹಬೀಬುರ್ ರೆಹಮಾನ್ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಆತ ನೀಡಿರುವ ಮಾಹಿತಿಯಂತೆ ರಾಮನಗರದಲ್ಲಿ ಸಜೀವ ಬಾಂಬುಗಳು ಪತ್ತೆಯಾಗಿದ್ದು, ಇದು ನಗರದ ನಾಗರಿಕರ ಭಯಕ್ಕೆ ಕಾರಣವಾಗಿತ್ತು.
ತಾಲೂಕಿನ ಹಲವು ಕಡೆ ಸಂಶಯಾಸ್ಪದ ಬಾಂಗ್ಲಾದೇಶದ ವ್ಯಕ್ತಿಗಳು ವಾಸವಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕೆಲಸವಾಗಬೇಕು. ‘ಜಮಾತ್’ ಹೆಸರಿನಲ್ಲಿ ಮೂಲಭೂತವಾದ ಬೋಧಿಸುವ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು. ಇಸ್ಲಾಂ ಮೂಲಭೂತವಾದನ್ನು ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು. ನಾಗರಿಕರಲ್ಲಿ ವಿಶ್ವಾಸವನ್ನು ಮೂಡಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಆಡಳಿತ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರು, ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
.