ದೊಡ್ಡಬಳ್ಳಾಪುರ: ನಗರದ ನಿರಾಶ್ರಿತರ ಕೇಂದ್ರದಲ್ಲಿ ಅಡುಗೆ ಮಾಡುತ್ತಿದ್ದಾಗ ಕುಕ್ಕರ್ ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬನ ಮುಖ, ಕಣ್ಣಿಗೆ ಗಂಭೀರ ಗಾಯಗಳಾಗಿವೆ.
ಅಡುಗೆ ಸಿಬ್ಬಂದಿ ಕೆಲಸಕ್ಕೆ ಗೈರಾದ ಹಿನ್ನೆಲೆ, ಸೋಮವಾರ ರಾತ್ರಿ ಕಿಶೋರ್ ಎಂಬಾತ ಅಡುಗೆ ಮಾಡಲ ಮುಂದಾಗಿದ್ದರು. ಈ ವೇಳೆ ಕುಕ್ಕರ್ ಸಿಡಿದು ಬಲಗಣ್ಣು ಹಾಗೂ ಮುಖ ಸಂಪೂರ್ಣ ಸುಟ್ಟಿದೆ. ರಾತ್ರಿ ಘಟನೆ ನಡೆದಿದ್ದರೂ ಗಾಯಾಳುವನ್ನು ಯಾರೂ ಆಸ್ಪತ್ರೆಗೆ ದಾಖಲು ಮಾಡಿಲ್ಲ. ಬೆಳಿಗ್ಗೆ ಸಾರ್ವಜನಿಕರು ಸೇರಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
ನಗರಸಭೆ ವತಿಯಿಂದ ಸ್ಥಾಪಿಸಲಾಗಿರುವ ನಿರಾಶ್ರಿತರ ಕೇಂದ್ರ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಸಿಬ್ಬಂದಿ ಕೇವಲ ನೋಂದಣಿ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಸಿಬ್ಬಂದಿ ಇದ್ದರೂ ಗೈರಾಗುತ್ತಿರುವುದರಿಂದ, ಕೆಲಸ ಮಾಡುವವರು ಯಾರೂ ಇಲ್ಲದಂತಾಗಿದೆ. ಕನಿಷ್ಠ ನಿತ್ಯ ಅಡುಗೆ ಮಾಡುವ ಸಿಬ್ಬಂದಿಯೂ ಕೇಂದ್ರದಲ್ಲಿ ಇಲ್ಲ. ಆದರೆ, ನೋಂದಣಿ ಪುಸ್ತಕದಲ್ಲಿ ಮಾತ್ರ ಎಲ್ಲರೂ ಇದ್ದಾರೆ. ಇಲ್ಲಿ 15 ಕ್ಕೂ ಹೆಚ್ಚು ಮಂದಿ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಇವರಿಗೆ ಆಹಾರ ತಯಾರಿಸಿಕೊಡಲು ಪ್ರತ್ಯೇಕ ಅಡುಗೆ ಸಿಬ್ಬಂದಿ ಇದ್ದರೂ, ಇಲ್ಲಿ ಉಳಿದುಕೊಂಡಿರುವವರೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ.
ಸಮಯಕ್ಕೆ ಸರಿಯಾಗಿ ಊಟವಿಲ್ಲ... ಉಪವಾಸದಲ್ಲಿ ನಿರಾಶ್ರಿತರು :
ಕಳೆದ ಜುಲೈನಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದ ನೆಪದಲ್ಲಿ ಒಂದು ವಾರ ನಿರಾಶ್ರಿತರ ಕೇಂದ್ರದಲ್ಲಿರುವವರಿಗೆ ಆಹಾರವೇ ನೀಡಿರಲಿಲ್ಲ. ಇನ್ನು, ಆಹಾರ ಒದಗಿಸಿದರೂ, ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಬೆಳಗಿನ ತಿಂಡಿ 12 ಗಂಟೆಗೆ ಮಾಡಿದರೆ, ಮಧ್ಯಾಹ್ನದ ಊಟ ಸಂಜೆ 4 ಗಂಟೆಗೆ ನೀಡುತ್ತಾರೆ. ರಾತ್ರಿ ಊಟದ ಬಗ್ಗೆ ಕೇಳುವವರೇ ಇಲ್ಲ. ನಿರಾಶ್ರಿತರ ಕೇಂದ್ರದ ಅವ್ಯಸ್ಥೆಯ ಬಗ್ಗೆ ಹಲವು ಬಾರಿ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಗರಸಭೆಯ ಸಮುದಾಯ ಸಂಘಟನೆ ಅಧಿಕಾರಿ ಮೀನಾ, ಇಲ್ಲಿನ ಪ್ರೋಗ್ರಾಂ ಮ್ಯಾನೇಜರ್ನನ್ನು ತಕ್ಷಣದಿಂದಲೇ ವಜಾ ಮಾಡಿ, ಎಲ್ಲಾ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ, ಅಂದು ಅಧಿಕಾರಿ ಹೇಳಿದ್ದ ಮಾತು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.
ಅವ್ಯವಸ್ಥೆ ಬಗ್ಗೆ ವಿಡಿಯೋ ಸಮೇತ ಅಧಿಕಾರಿಗಳಿಗೆ ತೋರಿಸಿದ ಬಳಿಕ, ಖುದ್ದು ಭೇಟಿ ನೀಡಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಆದರೆ, ಆ ಕಾರ್ಯ ಕೂಡ ನಡೆದಿಲ್ಲ. ನಿರಾಶ್ರಿತರ ಕೇಂದ್ರದಲ್ಲಿ ಅವ್ಯವಸ್ಥೆ ಇದ್ದರೂ, ನಗರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ಮಾಡುತ್ತಿದ್ದಾರೆ. ಆದ್ದರಿಂದ, ಕೇಂದ್ರದ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಎನ್ಜಿಒ ಸಂಸ್ಥೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.