ಬೆಂಗಳೂರು: 2019-20ನೇ ಸಾಲಿನ ಪೂರ್ವ ಮುಂಗಾರು ಹಂಗಾಮು ಅವಧಿ ಏಪ್ರಿಲ್ ಮತ್ತು ಮೇ ತಿಂಗಳಿನ ಕೃಷಿ ಚಟುವಟಿಕೆ ಆರಂಭವಾಗಿದೆ.
ಮಳೆ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ತುಮಕೂರು ಮತ್ತು ಚಿತ್ರದುರ್ಗದ ಕೆಲ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಕೃಷಿಗಾಗಿ ಭೂ ಸಿದ್ಧತೆ ಆರಂಭವಾಗಿದೆ. ಪೂರ್ವ ಮುಂಗಾರು ಅವಧಿಯಲ್ಲಿ ಏಪ್ರಿಲ್ವರೆಗೆ ಸಾಮಾನ್ಯ ಮಳೆ 43.9 ಮಿ.ಮೀ. ಪ್ರತಿಯಾಗಿ ಸರಾಸರಿ 29.5 ಮಿ.ಮೀ. ಮಳೆ ಆಗಿದೆ. ಅಂದರೆ ಸುಮಾರು 33 ಮಿ.ಮೀ. ಮಳೆ ಕೊರತೆ ಎದುರಾಗಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಾರ್ಚ್ನಿಂದ ಏಪ್ರಿಲ್ವರೆಗಿನ ಪೂರ್ವ ಮುಂಗಾರಿನಲ್ಲಿ 32 ಮಿ.ಮೀ. ಮಳೆ ಕೊರತೆ ಕಂಡಿದೆ. ಇನ್ನು ಉತ್ತರ ಒಳನಾಡಿನಲ್ಲಿ ಸುಮಾರು 41 ಮಿ.ಮೀ. ಮಳೆ ಅಭಾವ ಉಂಟಾಗಿದೆ. ಮಲೆನಾಡು ಪ್ರದೇಶದಲ್ಲಿ ಸರಾಸರಿ 39 ಮಿ.ಮೀ.ನಷ್ಟು ಪೂರ್ವ ಮುಂಗಾರು ಕಡಿಮೆಯಾಗಿದೆ. ಇನ್ನು ಕರಾವಳಿ ಕರ್ನಾಟಕದಲ್ಲಿ 22 ಮಿ.ಮೀ. ಪೂರ್ವ ಮುಂಗಾರು ಮಳೆಯ ಅಭಾವ ಆಗಿದೆ. ಒಟ್ಟು ರಾಜ್ಯದಲ್ಲಿ ಎರಡು ತಿಂಗಳಲ್ಲಿ ಸರಾಸರಿ 36 ಮಿ.ಮೀ. ಪೂರ್ವ ಮುಂಗಾರು ಮಳೆಯ ಕೊರತೆಯಾಗಿದೆ.
ಪೂರ್ವ ಮುಂಗಾರಿನ ಬಿತ್ತನೆ ಪ್ರಗತಿ:
ಕೃಷಿ ಇಲಾಖೆಯ ಏಪ್ರಿಲ್ವರೆಗಿನ ವರದಿಯ ಪ್ರಕಾರ ರಾಜ್ಯದಲ್ಲಿ ಈ ಬಾರಿ ಒಟ್ಟು 76.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ರು. ಇಲ್ಲಿವರೆಗೆ 0.007495 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 0.286 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿತ್ತು. ಇನ್ನು 2019-20 ಮುಂಗಾರಿನಲ್ಲಿ 22.75 ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ರಸಗೊಬ್ಬರಗಳ ಬೇಡಿಕೆ ಇದ್ದು, ಈಗಾಗಲೇ ರೈತರಿಗೆ ಸುಮಾರು 19 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳನ್ನು ಸರಬರಾಜು ಮಾಡಲಾಗಿದೆ.
ಮುಂಗಾರು ಮಳೆಯ ಆರಂಭವೂ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿರುವುದು ರೈತರು ಹಾಗೂ ಕೃಷಿ ಇಲಾಖೆಯನ್ನು ಕಂಗೆಡಿಸಿದೆ.