ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(KIAL) ಟರ್ಮಿನಲ್ 2ರ ಮೊದಲನೇ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಟರ್ಮಿನಲ್-2ರ ಒಳಾಂಗಣವನ್ನು ಹಚ್ಚ ಹಸಿರಿನ ಉದ್ಯಾನವನ ಪರಿಕಲ್ಪನೆಯಲ್ಲಿ ನಿರ್ಮಿಸಿದ್ದು, ವಿದೇಶಿ ವಿಮಾನ ನಿಲ್ದಾಣಗಳನ್ನು ಮೀರಿಸುವಂಥ ಹೈಟೆಕ್ ವ್ಯವಸ್ಥೆ ಹೊಂದಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಪ್ರತಿ ವರ್ಷಕ್ಕೆ 2 ಕೋಟಿ ಪ್ರಯಾಣಿಕರು ಬಂದುಹೋಗುವ ಸಾಮರ್ಥ್ಯ ಹೊಂದಿದೆ. ಸದ್ಯ ಪ್ರಯಾಣಿಕರ ದಟ್ಟಣೆ 1.6 ಕೋಟಿಗೆ ತಲುಪಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗುತ್ತಿದ್ದು, ಇದರಿಂದ ಚೆಕ್ ಇನ್, ಇಮಿಗ್ರೇಷನ್, ಭದ್ರತಾ ತಪಾಸಣೆ, ಬ್ಯಾಗೇಜ್ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ. ಹೀಗಾಗಿ ನಾಲ್ಕು ವರ್ಷದ ಹಿಂದೆಯೇ ಟರ್ಮಿನಲ್ 2 ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿತ್ತು.
ಟರ್ಮಿನಲ್ 2 ಸಾಮರ್ಥ್ಯ ಅಧಿಕ: ಟರ್ಮಿನಲ್ 2 ವೈಶಿಷ್ಟ್ಯತೆ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. 2.55 ಲಕ್ಷ ಚದರ್ ಮೀಟರ್ ವಿಸ್ತೀರ್ಣ ಇರುವ ಮೊದಲ ಹಂತವನ್ನು 13,000 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ವಾರ್ಷಿಕ 2.5 ಕೋಟಿ ಪ್ರಯಾಣಿಕರ ಸಾಮರ್ಥ್ಯವಿರುವ, ಎರಡನೇ ಹಂತ 4.41 ಲಕ್ಷ ಚದರ್ ಮೀಟರ್ ವಿಸ್ತೀರ್ಣವಿದ್ದು ಕಾಮಗಾರಿ ಪ್ರಾರಂಭವಾಗಿದೆ.
ಪರಿಸರ ಸ್ನೇಹಿ ಉದ್ಯಾನವನ: ಪ್ರಯಾಣಿಕರು ಟರ್ಮಿನಲ್ 2ನ್ನು ಪ್ರವೇಶಿಸಿದ ತಕ್ಷಣ ಉದ್ಯಾನವನದಂತೆ ಭಾಸವಾಗುವ ವಿನ್ಯಾಸ ಮಾಡಲಾಗಿದೆ. ಒಳಗಾಂಣಕ್ಕೆ ಹಚ್ಚ ಹಸಿರಿನ ಹೊದಿಕೆ ಹಾಕಲಾಗಿದೆ, ಚಿಕ್ಕ ಕುಂಡಗಳಲ್ಲಿ ಸ್ಥಳೀಯ ಸಸ್ಯ ಪ್ರಭೇದಗಳು, ಕೃತಕ ಜಲಪಾತ, ಸೂರ್ಯನ ಬೆಳಕು ನೇರವಾಗಿ ಟರ್ಮಿನಲ್ ಒಳಗೆ ಬೀಳುವಂತೆ ವಿನ್ಯಾಸಗೊಳಿಸಿದ್ದು, ಇದು ಪ್ರಯಾಣಿಕರ ಸ್ನೇಹಿ ವಿಮಾನ ನಿಲ್ದಾಣವಾಗಿದೆ.
ಇದನ್ನೂ ಓದಿ: ಕನಕದಾಸ, ವಾಲ್ಮೀಕಿ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ