ನೆಲಮಂಗಲ ( ಬೆಂಗಳೂರು): ಕೇಂದ್ರ ಸರ್ಕಾರ ದೇವಾಲಯಗಳ ದರ್ಶನಕ್ಕೆ ಅನುಮತಿ ನೀಡಿದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ ಗ್ರೇಡ್ ಶ್ರೇಣಿಯ ಪ್ರವಾಸಿಗರ ಕ್ಷೇತ್ರ ಶಿವಗಂಗೆಯಲ್ಲಿ ನಾಳೆ ದೇವಸ್ಥಾನದ ಬಾಗಿಲು ತೆರೆಯಲು ಭರದ ಸಿದ್ಧತೆ ನಡೆದಿದೆ.
ಬೆಂಗಳೂರಿನ ಹೊರವಲಯದ ನೆಲಮಂಗಲ ತಾಲೂಕಿನ ಚಾರಣಿಗರ ಸ್ವರ್ಗ ಶಿವಗಂಗೆಯಲ್ಲಿ, ದೇವಾಲಯದ ಆಡಳಿತ ಮಂಡಳಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಸಾಮಾಜಿಕ ಅಂತರಕ್ಕಾಗಿ ದೇವಾಲಯದ ಆವರಣದಲ್ಲಿ ಬಾಕ್ಸ್ ರೀತಿಯಲ್ಲಿ ಮಾರ್ಕ್ ಮಾಡಲಾಗಿದೆ.
ನಾಳೆ ಬೆಳಗ್ಗೆ 9 ಗಂಟೆಯಿಂದ ಶಿವಗಂಗೆ ದೇವಾಲಯ ದರ್ಶನಕ್ಕೆ ಮುಕ್ತವಾಗಲಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಹಲವು ತಿಂಗಳಿನಿಂದ ದೇವಾಲಯದ ಬಾಗಿಲನ್ನು ಹಾಕಲಾಗಿತ್ತು. ಕೇವಲ ದರ್ಶನಕ್ಕೆ ಮಾತ್ರ ಅನುಕೂಲ ಮಾಡಿದ್ದು, ತೀರ್ಥ, ಪ್ರಸಾದ, ದಾಸೋಹಕ್ಕೆ ಬ್ರೇಕ್ ಹಾಕಲಾಗಿದೆ.
ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಉಷ್ಣಾಂಶ ತಪಾಸಣೆ ದೇವಾಲಯದ ಮುಂಭಾಗದಲ್ಲೇ ಕಡ್ಡಾಯವಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಮತ್ತು 10 ವರ್ಷದ ಮಕ್ಕಳಿಗೆ ದರ್ಶನಕ್ಕೆ ನಿಷೇಧ ಹೇರಲಾಗಿದೆ ಎಂದು ಶಿವಗಂಗೆ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ದೇವಾಲಯದ ಸಿಇಓ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.