ದೊಡ್ಡಬಳ್ಳಾಪುರ: ವೇಗವಾಗಿ ಸಂಚರಿಸುತ್ತಿದ್ದ ವೇಳೆ ಟೈರ್ ಸ್ಫೋಟಗೊಂಡ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಟೆಂಪೋ ಪಲ್ಟಿ ಹೊಡೆದಿದ್ದು,ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ರಾಷ್ಟ್ರೀಯ ಹೆದ್ದಾರಿ 207ರ ದಾಬಸ್‌ಪೇಟೆ-ಹೊಸೂರು ರಸ್ತೆಯ ಹುಲಿಕುಂಟೆ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ರಘು (45) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕಬಳ್ಳಾಪುರದಿಂದ ಗುಲಾಬಿ ಹೂಗಳನ್ನು ತುಂಬಿದ ಮಿನಿ ಟೆಂಪೋ ತುಮಕೂರಿನ ಮಾರುಕಟ್ಟೆಗೆ ಹೊರಟಿತ್ತು. ದೊಡ್ಡಬಳ್ಳಾಪುರದ ಹುಲಿಕುಂಟೆ ಗ್ರಾಮದ ಬಳಿ ಬರುವ ವೇಳೆ ಮಿನಿ ಟೆಂಪೋದ ಟೈರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.