ಹೊಸಕೋಟೆ: ಕಳೆದ 30 ವರ್ಷಗಳಿಂದ ನಿರಂತರ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹೊಸಕೋಟೆ ತಾಲೂಕಿನ ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಮರಿಯಮ್ಮ ಅವರಿಗೆ ರಾಷ್ಟ್ರೀಯ ನೈಟಿಂಗೇಲ್ ಪ್ರಶಸ್ತಿ ಒಲಿದು ಬಂದಿದೆ.
ಮರಿಯಮ್ಮ ಅವರು 1990 ರಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸಕ್ಕೆ ಸೇರಿ, ಸುಮಾರು 10 ವರ್ಷ ಕರ್ತವ್ಯ ನಿರ್ವಹಿಸಿದರು. ಪ್ರಸ್ತುತ ನಂದಗುಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ಆರೈಕೆ ವಿಚಾರದಲ್ಲಿ ಮಾನವೀಯ ಅಂತಃಕರಣದ ಜನಾನುರಾಗಿಯಾಗಿ ಗುರುತಿಸಿಕೊಂಡು ತಾಲೂಕಿನಲ್ಲಿ ತುಂಬಾ ಹೆಸರುವಾಸಿಯಾಗಿದ್ದರು. ಮತ್ತು ತಮ್ಮ ಸೇವಾವಧಿಯಲ್ಲಿ ಸುಮಾರು 500 ಕ್ಕಿಂತ ಹೆಚ್ಚು ಹೆರಿಗೆಗಳನ್ನು ಸುಸೂತ್ರವಾಗಿ ನೆರವೇರಿಸಿದ್ದಾರೆ.
ಮರಿಯಮ್ಮಾ ಅವರಿಗೆ ಈ ಹಿಂದೆ 2011ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉತ್ತಮ ಆರೋಗ್ಯ ಸಹಾಯಕಿ ಹಾಗೂ 2017 ರಲ್ಲಿ ಜಿಲ್ಲೆಯ ಅತ್ಯುತ್ತಮ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮೇ 11ರಂದು ದೆಹಲಿಯಲ್ಲಿ ನಡೆಯಲಿರುವ ದಾದಿಯರ ದಿನದಂದು ರಾಷ್ಟ್ರೀಯ ನೈಟಿಂಗೇಲ್ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.