ದೊಡ್ಡಬಳ್ಳಾಪುರ: ಸಚಿವ ಸಂಪುಟದಲ್ಲಿ ವಲಸಿಗರಿಗೆ ಸಚಿವ ಸ್ಥಾನ ಸಿಕ್ಕಿದೆ, ಇನ್ನುಳಿದ 105 ಬಿಜೆಪಿ ಶಾಸಕರು ಕಡುಬು ತಿನ್ಬೇಕಾ ಎಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿಗೆ ಎಂಎಲ್ಸಿ ತೇಜಸ್ವಿನಿ ರಮೇಶ್ ತಿರುಗೇಟು ನೀಡಿದ್ದಾರೆ.
ದೊಡ್ಡಬಳ್ಳಾಪುರದ ದೊಡ್ಡರಾಯಪ್ಪನಹಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಎಂಎಲ್ಸಿ ತೇಜಸ್ವಿನಿ ರಮೇಶ್, ಕುಮಾರಸ್ವಾಮಿಯವರ ಹೇಳಿಕೆ ಅವರ ಅನುಭವದ ಮಾತು ಅಷ್ಟೇ. ಅವರು ಮೂಲ ಜೆಡಿಎಸ್ನವರನ್ನ ಕಾಳಜಿ ಮಾಡಿದ್ರೆ ಚೆಲುವನಾರಾಯಣಸ್ವಾಮಿ ಏಕೆ ಪಕ್ಷ ಬಿಟ್ಟು ಹೋಗುತ್ತಿದ್ದರು. ನಿನ್ನೆ ಸಚಿವರಾದ ಗೋಪಾಲಯ್ಯ ಜೆಡಿಎಸ್ ಬಿಟ್ಟು ನಮ್ಮ ಮನೆಗೆ ಏಕೆ ಬರ್ತಾ ಇದ್ರು. ಹೀಗೇ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಇದೆ. ಮೊದಲು ಅವರು ಅವರ ಮನೆಯ ಸಮಸ್ಯೆ ಸರಿ ಮಾಡಿಕೊಂಡರೆ ಒಳಿತು ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿಯವರಿಗೆ ರಾಜ್ಯ ಬಿಜೆಪಿ ಸರ್ಕಾರ ಬೀಳಿಸುವ ದುರಾಲೋಚನೆ ಇದೆ. ಅವಕಾಶ ಸಿಕ್ಕಾಗ ಸರ್ಕಾರ ಮತ್ತು ಸಹೋದ್ಯೋಗಿಗಳನ್ನ ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಅದರಲ್ಲಿ ವಿಫಲರಾಗಿದ್ದಾರೆ. ಆದರೆ, ಸಿಎಂ ಯಡಿಯೂರಪ್ಪ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಬಿಜೆಪಿ ಸಮರ್ಥವಾಗಿ ಆಡಳಿತ ನಡೆಸುತ್ತಿದೆ ಎಂದರು.
ಭಿನ್ನಮತೀಯ ಶಾಸಕರಿಂದ ಬಿಜೆಪಿ ಸರ್ಕಾರ ಬೀಳುತ್ತೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಯಾವ ಭಿನ್ನಮತೀಯರು ಇಲ್ಲ, ವಲಸಿಗರೂ ಇಲ್ಲ, ಇಲ್ಲಿ ಮೂಲದವರು ಎಂಬ ಪ್ರಶ್ನೆಯೇ ಇಲ್ಲ. ಇಲ್ಲಿ ಎಲ್ಲಾ ಒಂದೇ ಕುಟುಂಬದವರು ಎಂದರು.