ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಮಾಜಿ ಶಾಸಕ ವೆಂಕಟಸ್ವಾಮಿ ನಿಧನದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ದೇವನಹಳ್ಳಿ ತಾಲೂಕು ಸಾದಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ವೆಂಕಟಸ್ವಾಮಿ ಅಂತಿಮ ದರ್ಶನ ಪಡೆದರು.
ಸ್ನೇಹಿತ ವೆಂಕಟಸ್ವಾಮಿ ನಿಧನದಿಂದ ನೋವು: ವೆಂಕಟಸ್ವಾಮಿ ಅಂತಿಮ ದರ್ಶನ ಪಡೆದ ಮಾತನಾಡಿದ ಡಿಕೆಶಿ, ನನ್ನ ಸ್ನೇಹಿತರು ನನ್ನ ಜತೆ ಶಾಸಕರಾಗಿದ್ದ ವೆಂಕಟಸ್ವಾಮಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನ ಸುದ್ದಿ ಕೇಳಿ ನನಗೆ ಶಾಕ್ ಆಯ್ತು. ಸಂಘಟನೆ ಮಾಡಿಕೊಂಡಿದ್ದು, ಕ್ಷೇತ್ರದ ಟಿಕೆಟ್ ಬಯಸಿದ್ದವರು. ಅವರ ಸಾವಿನಿಂದ ನಮಗೆಲ್ಲ ತುಂಬಾ ದುಃಖವಾಗಿದೆ ಎಂದರು.
ಮಾಜಿ ಶಾಸಕ ವೆಂಕಟಸ್ವಾಮಿ ಅಂತಿಮ ದರ್ಶನ ಪಡೆದ ಬಳಿಕ ಒಂದು ಕಡೆ ಡಿಕೆಶಿ ಸೇರಿ ಮುಖಂಡರು ಕುಳಿತಿದ್ದರು. ಬಿಜೆಪಿ ಮುಖಂಡನ ಜತೆ ಮಾತನಾಡುತ್ತ, ನನ್ನನ್ನು ಸಿಎಂ ಯಾವಾಗ ಮಾಡ್ತೀರಾ ಎನ್ನುವ ಮೂಲಕ ಕೆ ಹೆಚ್ ಮುನಿಯಪ್ಪ ಮತ್ತು ಬಿಜೆಪಿ ಮುಖಂಡ ಬಸವರಾಜ್ ಅವರ ನಡುವೆ ಕುಳಿತು ಈ ಬೇಡಿಕೆ ಇಟ್ಟರು. ನನ್ನ ಆತ್ಮೀಯನಿಗೆ ಕೇಳ್ತಿದ್ದೀನಿ. ನನ್ನನ್ನು ಸಿಎಂ ಮಾಡಬೇಕು ಅಂತಿದ್ದಿಯೋ ಇಲ್ವೋ ಎಂದು ಕೆ ಹೆಚ್ ಮುನಿಯಪ್ಪ ಅವರಿಗೆ ಹೇಳುವ ರೀತಿ ಇತ್ತು. ಡಿಕೆಶಿ ಮಾತಿಗೆ ದೇವನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕೆ ಹೆಚ್ ಮುನಿಯಪ್ಪ ನಕ್ಕು ಸುಮ್ಮನಾದರು.
ಕೋಲಾರ ಕ್ಷೇತ್ರದ ಟಿಕೆಟ್ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಜತೆ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದ ಡಿಕೆಶಿ, ಅವರಿಬ್ಬರು ಸೇರಿ ತೀರ್ಮಾನ ಮಾಡ್ತಾರೆ ಅಂತಾ ತಿಳಿಸಿದರು. ಸಾವಿನ ಮನೆಯಲ್ಲೂ ಬಂಡಾಯ ಶಮನಕ್ಕೆ ಡಿಕೆಶಿ ಪ್ರಯತ್ನಿಸಿದರು. ಇದೇ ವೇಳೆ ಬಂಡಾಯಗಾರರೊಂದಿಗೆ ಡಿಕೆಶಿ ಮಾತುಕತೆ ನಡೆಸಿದರು. ದೇವನಹಳ್ಳಿ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿ ಗಳಾಗಿದ್ದ ಎ ಸಿ ಶ್ರೀನಿವಾಸ್ ಹಾಗೂ ಶಾಂತಕುಮಾರ್ ಜತೆ ಡಿಕೆ ಗುಪ್ತವಾಗಿ ಚರ್ಚೆ ನಡೆಸಿದರು.
ಈಗಾಗಲೇ ಕೆ ಹೆಚ್ ಮುನಿಯಪ್ಪಗೆ ದೇವನಹಳ್ಳಿ ಟಿಕೆಟ್ ಆದ ಹಿನ್ನೆಲೆ ಎಲ್ಲಿಯೂ ಕಾಣಿಸಿಕೊಳ್ಳದೆ ಇಬ್ಬರು ಆಕಾಂಕ್ಷಿಗಳು ಮುನಿಸಿಕೊಂಡಿದ್ದಾರೆ. ಹೀಗಾಗಿ ವೆಂಕಟಸ್ವಾಮಿ ಅಂತಿಮ ದರ್ಶನ ಜತೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎ ಸಿ ಶ್ರೀನಿವಾಸ್ ಒಬ್ಬರನ್ನು ಪಕ್ಕಕ್ಕೆ ಕರೆದುಕೊಂಡು ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದರು.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಇಲ್ಲ: ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಬಹುನಿರೀಕ್ಷಿತ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 43 ಅಭ್ಯರ್ಥಿಗಳನ್ನು ಹೆಸರನ್ನು ಅಖೈರು ಮಾಡಿ, ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿದೆ. ವರುಣ ಜೊತೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಲಾಗಿಲ್ಲ.
ಕೋಲಾರದಿಂದ ಕೊತ್ತೂರು ಜಿ.ಮಂಜುನಾಥ್ಗೆ ಟಿಕೆಟ್ ವಿತರಿಸಲಾಗಿದೆ. ಬಿಜೆಪಿಗೆ ರಾಜೀನಾಮೆ ನೀಡಿ ನಿನ್ನೆಯಷ್ಟೇ ಕಾಂಗ್ರೆಸ್ ಸೇರಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅಥಣಿ ಟಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಬಂದ್ರೆ ಸ್ವಾಗತಿಸುವೆ: ಸಿದ್ದರಾಮಯ್ಯ