ದೊಡ್ಡಬಳ್ಳಾಪುರ: ಸರ್ಕಾರದ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಾರ್ಹವಾಗಿದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದು ವಕೀಲರಾದ ಮಾವಿನಕುಂಟೆ ರವಿ ಹೇಳಿದರು.
ನಗರದ ಕರ್ನಾಟಕ ಮರಾಠ ಕ್ಷತ್ರಿಯ ಪರಿಷತ್ತು ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠ ಸಮೂದಾಯವು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ತುಂಬಾ ಹಿಂದುಳಿದ ಜನಾಂಗವಾಗಿದ್ದು, ನಾವು 3B ಪಟ್ಟಿಯಲ್ಲಿ ಬರುತ್ತೇವೆ. ಹಾಗಾಗಿ ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ನಾವು ತಲೆ ತಲಾಂತರದಿಂದ ಈ ಮಣ್ಣಿನಲ್ಲಿ ಹುಟ್ಟಿ ಬೆಳೆದಿದ್ದೇವೆ, ನಮ್ಮ ಜನಾಂಗವೂ ಸಹ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದು, ಬೆಳಗಾವಿ ಎಂದೆಂದಿಗೂ ಕರ್ನಾಟಕದ ಭಾಗವಾಗಿದೆ. ಕನ್ನಡಿಗರನ್ನು ಕೆಣಕುವ ಪುಂಡರನ್ನು ಸರ್ಕಾರ ಹತೋಟಿಯಲ್ಲಿ ಇಡಬೇಕು ಎಂದು ಹೇಳಿದ ಅವರು, ಕನ್ನಡ ಪರ ಸಂಘಟನೆಗಳು ಎಂಇಎಸ್ ನಂತಹ ಕಿಡಿಗೇಡಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸಿ ಕರೆ ಕೊಟ್ಟಿರುವ ರಾಜ್ಯ ಬಂದ್ನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.