ದೇವನಹಳ್ಳಿ: ಸಹಾಯ ಮಾಡುವ ನೆಪವೊಡ್ಡಿ ಎಟಿಎಂ ಕೇಂದ್ರಕ್ಕೆ ಬಂದ ಅಪರಿಚಿತ ವ್ಯಕ್ತಿಯೋರ್ವ ಹಣ ಡ್ರಾ ಮಾಡುವಾಗ ಕಾರ್ಡ್ ಬದಲಾಯಿಸಿ ಅಣ್ಣ ಜೋಪಾನವೆನ್ನುತ್ತಾ ವ್ಯಕ್ತಿಯೊಬ್ಬರಿಗೆ 45,600 ರೂ ವಂಚಿಸಿದ ಘಟನೆ ದೇವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ದೇವನಹಳ್ಳಿ ತಾಲೂಕಿನ ಚನ್ನಹಳ್ಳಿಯ ನಿವಾಸಿ ನಾರಾಯಣಸ್ವಾಮಿ ಎಂಬುವರು ಮನೆಯಲ್ಲಿ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಿದ್ದರು. ಪೂಜೆಗೆ ಬೇಕಾದ ಸಾಮಗ್ರಿಗಳನ್ನು ತರಲು ಮಗನ ಎಟಿಎಂ ಕಾರ್ಡ್ ತೆಗೆದುಕೊಂಡು ದೇವನಹಳ್ಳಿ ಪಟ್ಟಣಕ್ಕೆ ಬಂದಿದ್ದರು. ಹಣ ಡ್ರಾ ಮಾಡಲು ಎಟಿಎಂಗೆ ಬಂದಾಗ 10 ಸಾವಿರ ರೂ ಡ್ರಾ ಮಾಡಬೇಕಿದ್ದ ಅವರು, ಸಣ್ಣದೊಂದು ಅಚಾತುರ್ಯದಿಂದ 1 ಸಾವಿರ ರೂ. ಡ್ರಾ ಮಾಡಿದ್ದರು. ಅನಂತರ ಎರಡನೇ ಬಾರಿ 9 ಸಾವಿರ ರೂ ಡ್ರಾ ಮಾಡಿದ್ದಾರೆ.
ಇದನ್ನೂ ಓದಿ: ಸಾಲ ಕೊಡಿಸುವುದಾಗಿ ಪಂಗನಾಮ: ಮನೆ ಜಪ್ತಿಯ ಬ್ಯಾಂಕ್ ನೋಟಿಸ್ನಿಂದ ವಂಚನೆ ಬೆಳಕಿಗೆ
ಈ ಸಮಯಕ್ಕೆ ಎಟಿಎಂ ಕೇಂದ್ರದಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಅಣ್ಣ ಹಣ ಜೋಪಾನವಾಗಿ ಎಣಿಸಿಕೊಳ್ಳಿ ಎಂದು ಹೇಳಿ ಸಹಾಯ ಮಾಡುವ ನೆಪವೊಡ್ಡಿ ಬಂದು ಎಟಿಎಂ ಕಾರ್ಡ್ ಬದಲಿಸಿ ಕೊಟ್ಟಿದ್ದಾನೆ. ನಾರಾಯಣ ಸ್ವಾಮಿ ಮನೆಗೆ ಬರುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಅಕೌಂಟ್ನಲ್ಲಿದ್ದ 45,600 ರೂಪಾಯಿ ದೋಚಿದ್ದಾನೆ. ನವೆಂಬರ್ 28 ರಂದು ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಲಕ್ಷ ಹೂಡಿಕೆ ಮಾಡಿ ಕೋಟಿ ಪಡೆಯುವ ಆಮಿಷ: ತಲೆ ಮರೆಸಿಕೊಂಡ ಪ್ರಮುಖ ಆರೋಪಿ