ದೊಡ್ಡಬಳ್ಳಾಪುರ: ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್ಡೌನ್ ಜಾರಿಯಾದ ಕಾರಣ ದ್ರಾಕ್ಷಿ ಬೆಳೆಗಾರ ತತ್ತರಿಸಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿಯ ರೈತರೊಬ್ಬರು 3 ಎಕರೆಯಲ್ಲಿ ದಿಲ್ಖುಷ್ ದ್ರಾಕ್ಷಿ ಬೆಳೆದಿದ್ದರು. ಈ ಸಲ ಭರ್ಜರಿ ಫಸಲು ಬಂದು ತೋಟದಲ್ಲಿ ಅಂದಾಜು 50 ರಿಂದ 60 ಟನ್ ದ್ರಾಕ್ಷಿ ಗೊಂಚಲುಗಳು ತೂಗುತ್ತಿದ್ದವು. ಭರಪೂರ ಬೆಳೆ ಕಂಡು ಬರೋಬ್ಬರಿ 12 ರಿಂದ 15 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಕೊರೊನಾ ವೈರಸ್ ರೈತರ ಕನಸುಗಳನ್ನು ಪುಡಿಗಟ್ಟಿದೆ. ಲಾಕ್ಡೌನ್ನಿಂದ ಪ್ರಮುಖ ಮಾರುಕಟ್ಟೆಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶಕ್ಕೆ ರಫ್ತು ನಿಷೇಧಗೊಂಡಿರುವುದರಿಂದ ಹೊರ ರಾಜ್ಯಗಳಿಗೆ ಕಳುಹಿ ಸಲಾಗದೇ ತೋಟದಲ್ಲೇ ದ್ರಾಕ್ಷಿ ಕೊಳೆಯುವ ಪರಿಸ್ಥಿತಿ ಉದ್ಭವಿಸಿದೆ.
ತೋಟಕ್ಕೆ ಬರುತ್ತಿದ್ದ ಏಜೆಂಟರು ದ್ರಾಕ್ಷಿ ಖರೀದಿಸುತ್ತಿದ್ದರು. ಆದರೆ ಲಾಕ್ಡೌನ್ ಕಾರಣ ಯಾರೂ ಕೂಡ ತೋಟದತ್ತ ಸುಳಿಯುತ್ತಿಲ್ಲ. ಇತ್ತ ತಾವೇ ಮಾರುಕಟ್ಟೆಗೆ ಸಾಗಿಸಲು ಹೊರರಾಜ್ಯದವರು ಅನುಮತಿಸುತ್ತಿಲ್ಲ. ಇದರಿಂದಾಗಿ ತೋಟದಲ್ಲಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ದ್ರಾಕ್ಷಿಯನ್ನು ಕೇಳುವವರೇ ಇಲ್ಲದಾಗಿದೆ. ಇಂತಹ ಸಮಯದಲ್ಲಿ ಸರ್ಕಾರ ನಮಗೆ ಪರಿಹಾರ ನೀಡಬೇಕು. ಇಲ್ಲವೇ ಸೂಕ್ತ ಮಾರುಕಟ್ಟೆ ಒದಗಿಸಬೇಕು ಎಂದು ದ್ರಾಕ್ಷಿ ಬೆಳೆಗಾರರು ಒತ್ತಾಯಿಸಿದ್ದಾರೆ.