ಆನೇಕಲ್: ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಹಾಳು ಮಾಡಲು ಅಂತಾನೇ ಇದೆ. ಜೆಡಿಎಸ್ ಅತಿದೊಡ್ಡ ಕಾರ್ಖಾನೆ ಇದ್ದಂತೆ. ಆ ಕಾರ್ಖಾನೆಗೆ ಬಂದು ಕೆಲಸ ಕಲಿತು ಇಂಜಿನಿಯರ್ ಗಳಾಗಿ ಬೇರೆ ಕಾರ್ಖಾನೆಗೆ ಹೋಗುತ್ತಾರೆಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್, ಪುಟ್ಟಣ್ಣಯ್ಯ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ ಕಣಕ್ಕಿಳಿದಿದ್ದು, ಇಂದು ಬೆಂಗಳೂರು ಹೊರವಲಯದ ಗೊಟ್ಟಿಗೆರೆಯಲ್ಲಿ ಶಿಕ್ಷಕರು, ಕಾರ್ಯಕರ್ತರು ಹಾಗೂ ಮುಖಂಡರುಗಳ ಜೊತೆ ಸಭೆ ನಡೆಸಲಾಯಿತು. ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ಪಕ್ಷದವರು ಪ್ಲಾನ್ ಮಾಡಿಕೊಂಡು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇನ್ನೂ ಹಲವರು ಸೇರಿಕೊಂಡು ಒಂದು ಗುಂಪಾಗಿ ಕುಮಾರಸ್ವಾಮಿ ಅವರಿಗೆ ಮಸಿ ಬಳಿಯಲು ಮುಖ್ಯಮಂತ್ರಿಯನ್ನಾಗಿ ಮಾಡಿದರು.
ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಳೆದ ಮೂರು ಬಾರಿ ಪುಟ್ಟಣ್ಣಗೆ ಟಿಕೆಟ್ ನೀಡಿ ಮೋಸ ಹೋಗಿದ್ದೇವೆ. ಪುಟ್ಟಣ್ಣ ಒಬ್ಬ ಸಾಮಾನ್ಯ ಕಾರ್ಯಕರ್ತ, ಅವರನ್ನು ಬೆಳೆಸಿದ್ದು ಕುಮಾರಸ್ವಾಮಿಯವರು ಈಗ ಗಿಡ ಮರವಾಗಿದೆ ಬೇರುಗಳು ಬಿಟ್ಟಿದೆ ಎಂದು ಪಕ್ಷವನ್ನು ಬಿಟ್ಟು ಹೋಗಿದ್ದಾರೆ. ಈಗ ಬಿಜೆಪಿ ಪಕ್ಷಕ್ಕೆ ಸೇರಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಅವರು ಸ್ವತಃ ವರ್ಚಸ್ಸು ಇದ್ದರೆ ಚಿಹ್ನೆ ಇಲ್ಲದೇ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲ್ಲಲಿ ನೋಡೋಣ ಎಂದು ಸವಾಲ್ ಹಾಕಿದರು.