ದೊಡ್ಡಬಳ್ಳಾಪುರ: ರಾಜ್ಯದ ಸುಪ್ರಸಿದ್ದ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಹೊಸ ವರ್ಷದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ, ಬೆಂಗಳೂರು, ಚಿಕ್ಕಬಳ್ಳಾಪುರ, ಗೌರಿಬಿದನೂರು ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಏಕಶಿಲೆಯಲ್ಲಿ ಸುಬ್ರಮಣ್ಯ ಸ್ವಾಮಿ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಇರುವುದು ಘಾಟಿ ಕ್ಷೇತ್ರದ ವಿಶೇಷ. ಪ್ರಸಿದ್ಧ ನಾಗದೇವತಾ ಆರಾಧನಾ ಕ್ಷೇತ್ರವಾಗಿರುವ ಘಾಟಿಯಲ್ಲಿ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ರಥೋತ್ಸವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಹೊಸ ವರ್ಷದ ದಿನದಂದು ಷಷ್ಠಿ ಬಂದಿರುವುದರಿಂದ ಘಾಟಿ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಮುಜರಾಯಿ ಇಲಾಖೆ ಮತ್ತು ಭಕ್ತಾದಿಗಳ ಸಹಯೋಗದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಸುಬ್ರಮಣ್ಯ ಸ್ವಾಮಿಯ ರಥೋತ್ಸವ ಅಂಗವಾಗಿ ಡಿಸೆಂಬರ್ 28 ರಿಂದ ವಿಶೇಷ ಪೂಜೆಗಳು ನಡೆಯುತ್ತಿದ್ದು, ಜನವರಿ 3ರವರೆಗೂ ವಿಶೇಷ ಪೂಜೆಗಳು ನೆರವೇರಲಿವೆ.