ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ನಂದಿ ಬೆಟ್ಟ ಪ್ರವಾಸಕ್ಕೆ ಬಂದಿದ್ದ ನಾಲ್ವರು ಯುವಕರು ನೀರು ಪಾಲಾಗಿರುವ ಘಟನೆ ದೇಹನಹಳ್ಳಿ ಸಮೀಪದ ರಾಮನಾಥಪುರ ಕೆರೆಯಲ್ಲಿ ಇಂದು ನಡೆದಿದೆ. ಬೈಕ್ನಲ್ಲಿ ಬಂದಿದ್ದ ಯುವಕರು ಬೆಂಗಳೂರಿಗೆ ವಾಪಸ್ ಮರಳುತ್ತಿರುವಾಗ ದಾರಿ ಮಧ್ಯೆ ಸಿಕ್ಕ ಕೆರೆಯಲ್ಲಿ ಈಜಲು ಹೋದಾಗ ದುರಂತ ಜರುಗಿದೆ.
ಬೆಂಗಳೂರಿನ ಆರ್ಟಿ ನಗರದ ಯುವಕರ ತಂಡ ಇಂದು ಬೆಳಗ್ಗೆ ನಂದಿಬೆಟ್ಟಕ್ಕೆ ಬೈಕ್ನಲ್ಲಿ ಬಂದಿದ್ದರು. ಮಧ್ಯಾಹ್ನ ನಂದಿಬೆಟ್ಟದಿಂದ ಅವರೆಲ್ಲರೂ ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ರಾಮನಾಥಪುರ ಕೆರೆಯಲ್ಲಿ ಈಜಲು ಹೋಗಿದ್ದರು. ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಕೆರೆಯ ದಂಡೆಯಲ್ಲಿ ನಿಂತ್ತಿದ್ದ ಬೈಕ್ಗಳು ಮತ್ತು ಯುವಕರ ಬಟ್ಟೆಗಳನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಮುಳುಗಿರುವ ಶವಗಳ ಪತ್ತೆಗಾಗಿ ಕಾರ್ಯಚಾರಣೆ ನಡೆಸಿದ್ದಾರೆ. ಸದ್ಯ ಇಬ್ಬರ ಶವಗಳು ಪತ್ತೆಯಾಗಿದ್ದು, ಮತ್ತಿಬ್ಬರು ಯುವಕರ ಶವ ಪತ್ತೆಗಾಗಿ ಕಾರ್ಯಚಾರಣೆ ಮುಂದುವರೆದಿದೆ. ಮೃತ ಯವಕರ ಪೊಷಕರು ಸ್ಥಳಕ್ಕೆ ಬಂದಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:ಟೈರ್ ಸ್ಫೋಟಗೊಂಡು ಲಾರಿಗೆ ಗುದ್ದಿದ ಕಾರು: ಸ್ಥಳದಲ್ಲೇ ಆರು ಜನರ ದುರ್ಮರಣ
ತುಂಗಾ ನದಿಯಲ್ಲಿ ಮೃತಪಟ್ಟಿದ್ದ ಇಬ್ಬರು ವಿದ್ಯಾರ್ಥಿಗಳು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬಳಿಯ ನೆಮ್ಮಾರು ಸಮೀಪದ ತುಂಗಾ ನದಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರೂ ವಿದ್ಯಾರ್ಥಿಗಳು ನೀರುಪಾಲಾಗಿದ್ದ ಇದೇ 23ರಂದು ನಡೆದಿತ್ತು. ಮೃತ ವಿದ್ಯಾರ್ಥಿಗಳನ್ನು ಹರಿಹರಪುರದ ರಕ್ಷಿತ್ (20) ಹಾಗೂ ಶೃಂಗೇರಿ ಸುಂಕದ ಮಕ್ಕಿಯ ಪ್ರಜ್ವಲ್ (21) ಎಂದು ಗುರುತಿಸಲಾಗಿತ್ತು. ಇವರು ಶೃಂಗೇರಿ ಪಟ್ಟಣದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.
ಕಾಲೇಜು ವಿದ್ಯಾರ್ಥಿಗಳು ಸೇರಿಕೊಂಡು ಒಂದು ದಿನದ ಹೊರ ಸಂಚಾರಕ್ಕೆ ಹೋಗಿದ್ದರು. ನದಿ ನೀರಿನಲ್ಲಿ ಸ್ನೇಹಿತರೆಲ್ಲರೂ ಈಜಲು ತೆರಳಿದ್ದರು. ಈಜಾಡುತ್ತಿದ್ದಾಗ ರಕ್ಷಿತ್ ನೀರಿನಲ್ಲಿ ಸಿಲುಕಿಕೊಂಡು ಮುಳುಗುತ್ತಿದ್ದ. ಈ ವೇಳೆ ರಕ್ಷಿತ್‌ನ ರಕ್ಷಣೆಗೆಂದು ಪ್ರಜ್ವಲ್ ತೆರಳಿದ್ದ. ಇದನ್ನು ನೋಡಿದ ವಿದ್ಯಾರ್ಥಿಗಳು ಕೂಡಲೇ ಸ್ಥಳೀಯರಿಗೆ ಮಾಹಿತಿ ಮುಟ್ಟಿಸಿದ್ದರು. ಸುತ್ತಲೂ ನುರಿತ ಈಜುಗಾರರು ಯಾರೂ ಇಲ್ಲದ ಕಾರಣ ನದಿಯಲ್ಲಿ ಇಬ್ಬರು ಸಹ ಕೊಚ್ಚಿಕೊಂಡು ಹೋಗಿದ್ದರು. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈಜುಕೊಳದಲ್ಲಿ ಮುಳುಗಿ ಬಾಲಕರಿಬ್ಬರು ಸಾವು: ಮತ್ತೊಂದೆಡೆ, ಇತ್ತೀಚಿಗೆ ಬಾಲಕರಿಬ್ಬರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ದಾವಣಾಗೆರೆ ನಗರದ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿತ್ತು. ಮೃತರು ನಗರದ ಬೀಡಿ ಲೇಔಟ್ನ ನಿವಾಸಿಗಳಾಗಿದ್ದರು. ಬಿಸಿಲಿನಿಂದ ರೋಸಿ ಹೋಗಿದ್ದ ಬಾಲಕರು ಈಜುಕೊಳಕ್ಕಾಗಮಿಸಿದ್ದರು. ಮೇಲಿಂದ ನೀರಿಗೆ ಧುಮುಕಿ ಈಜಾಡಲು ತೆರಳಿದ್ದ ಇಬ್ಬರು ಬಾಲಕರಿಗೆ ಈಜು ಬಾರದ ಹಿನ್ನೆಲೆ ಸಾವನ್ನಪ್ಪಿದ್ದರು. ಈಜುಕೊಳದಲ್ಲಿ ಯಾವ ಮಾರ್ಗದರ್ಶಕರು ಹಾಗೂ ತರಬೇತಿದಾರರು ಇಲ್ಲದಿರುವುರಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: ಬಿರು ಬಿಸಿಲಿಗೆ ಕಂಗೆಟ್ಟು ಈಜುಕೊಳಕ್ಕೆ ತೆರಳಿದ್ದ ಬಾಲಕರಿಬ್ಬರು ಸಾವು