ನೆಲಮಂಗಲ: ದೇವಸ್ಥಾನ ಪೂಜಾರಿಯ ಮೇಲಿನ ದ್ವೇಷದ ಹಿನ್ನೆಲೆ, ಮನೆಯ ಮುಂದೆ ನಿಲ್ಲಿಸಿದ ಕಾರಿಗೆ ಬೆಂಕಿಯಿಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನಿಯೂರು ಮಹಾದೇವಿ ಆಶ್ರಮದದಲ್ಲಿ ನಡೆದಿದೆ.
ಆಶ್ರಮದ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಅವಲಪ್ಪಚಾರ್ ಅವರ, ಇನ್ನೋವಾ ಕಾರು ದುಷ್ಕರ್ಮಿಗಳ ಕೃತ್ಯದಿಂದ ಸುಟ್ಟು ಕರಕಲಾಗಿದೆ. ರಾತ್ರಿ 12ಗಂಟೆ ಸಮಯದಲ್ಲಿ ಮನೆಯ ಬಾಗಿಲುಗಳಿಗೆ ಚಿಲಕ ಹಾಕಿದ ದುಷ್ಕರ್ಮಿಗಳು, ಮನೆ ಮುಂದೆ ನಿಲ್ಲಿಸಿದ ಕಾರಿಗೆ ಬೆಂಕಿ ಇಟ್ಟಿದ್ದಾರೆ. ಮನೆಯಲ್ಲಿದ್ದವರು ಬೆಂಕಿ ಆರಿಸಲು ಹೊರಗೆ ಬರಲಾಗದೇ, ತಮ್ಮ ಕಾರು ಕಣ್ಮುಂದೆ ಸುಟ್ಟು ಕರಕಲಾಗುತ್ತಿರುವುದನ್ನ ನೋಡಿ ನಿಲ್ಲಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದರು.
ಬೆಂಕಿಯ ಕೆನ್ನಾಲಿಗೆಗೆ ಮನೆಯ ಮುಂಭಾಗದ ಚಾವಣಿ ಸಹ ಹಾಳಾಗಿದೆ. ಮನೆಯ ಬಾಗಿಲ ಚಿಲಕ ಹಾಕಿರುವುದರಿಂದ ಹಳೇ ದ್ವೇಷದ ಹಿನ್ನೆಲೆ, ದುಷ್ಕರ್ಮಿಗಳ ಕೃತ್ಯ ನಡೆಸಿರುವ ಶಂಕೆಯನ್ನ ಆಶ್ರಮದ ಪೂಜಾರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.