ದೇವನಹಳ್ಳಿ: ಹೊಸಕೋಟೆ ತಾಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಘಟನೆಯಲ್ಲಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಪಾಲಾಗಿದ್ದ ಕಾರ್ಮಿಕರಲ್ಲಿ ಇಂದು ಮತ್ತೆ ಇಬ್ಬರು ಸಾವನ್ನಪ್ಪಿದ್ದು, ಈ ಮೂಲಕ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಮಾರ್ಚ್ 26 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮೇಡಹಳ್ಳಿ ಗ್ರಾಮದಲ್ಲಿ, ಕಾರ್ಖಾನೆ ಕೆಲಸಕ್ಕೆಂದು ಬರುವ ಕಾರ್ಮಿಕರಿಗೆ ಗುತ್ತಿಗೆದಾರರು ನೀಡುವ ಕೊಠಡಿಯಲ್ಲಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿತ್ತು. ಹೊಸಕೋಟೆಯ ತಿರುಮಲಶೆಟ್ಟಿ ಹಳ್ಳಿ ಹಾಗೂ ಅನುಗೊಂಡನಹಳ್ಳಿ ಸುತ್ತಮುತ್ತ ಕೈಗಾರಿಕಾ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಜನ ಕೂಲಿ ಕಾರ್ಮಿಕರು ಬರುತ್ತಾರೆ.
ಹೀಗೆ ಕಳೆದ ಮೂರು ತಿಂಗಳ ಹಿಂದೆ ಬಿಹಾರ ಹಾಗೂ ಉತ್ತರಪ್ರದೇಶದಿಂದ ಬಂದ ಎಂಟು ಜನ ಕಾರ್ಮಿಕರು, ಗುತ್ತಿಗೆದಾರರು ನೀಡಿದ ಶೆಡ್ನಲ್ಲಿ ವಾಸವಿದ್ದರು. ಕಾರ್ಮಿಕರಿಗೆ ಅಡುಗೆ ಮಾಡಿಕೊಳ್ಳಲು ಸ್ವತಃ ಗುತ್ತಿಗೆದಾರರೇ ಒಂದು ಗ್ಯಾಸ್ಸ್ಟೌ ಕೂಡ ಕೊಟ್ಟಿದ್ದರು. ಕಳೆದ ಭಾನುವಾರ ರಾತ್ರಿ ಶೆಡ್ನಲ್ಲಿ ಕಾರ್ಮಿಕರು ಅಡುಗೆ ಮಾಡಿ, ಊಟ ಮಾಡಿ ವಿಶ್ರಾಂತಿಗೆ ಮರಳಿದ್ದಾರೆ. ಎಲ್ಲರೂ ಗಾಢ ನಿದ್ದೆಯಲ್ಲಿದ್ದ ಸಮಯದಲ್ಲಿ ಗ್ಯಾಸ್ ಸೋರಿಕೆ ಆಗಿದೆ.
ಅವರಲ್ಲಿ ಒಬ್ಬ ಶೌಚಾಲಯಕ್ಕೆ ಹೋಗಲೆಂದು ಎದ್ದವನು, ಗ್ಯಾಸ್ ಸೋರಿಕೆಯಾಗಿರುವುದು ಗಮನಕ್ಕೆ ಬಾರದೆ ಲೈಟ್ ಸ್ವಿಚ್ ಆನ್ ಮಾಡಿದ್ದಾನೆ. ಅಷ್ಟೊತ್ತಿಗಾಗಲೇ ಶೆಡ್ ತುಂಬಾ ಗ್ಯಾಸ್ ತುಂಬಿದ್ದ ಕಾರಣ ಬೆಂಕಿ ಹೊತ್ತಿಕೊಂಡಿದೆ. ಕೊಠಡಿಯಲ್ಲಿದ್ದ 8 ಜನ ಕಾರ್ಮಿಕರಿಗೂ ಸುಟ್ಟ ಗಾಯಗಳಾಗಿತ್ತು. ಘಟನೆ ನಡೆದ ತಕ್ಷಣವೇ ಗಾಯಗೊಂಡ ಕಾರ್ಮಿಕರನ್ನು ಸ್ಥಳೀಯರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಿಸಿದ್ದರು.
ಆದರೆ ಶೇ 60 ರಷ್ಟು ಸುಟ್ಟ ಗಾಯಗಳೊಂದಿಗೆ ನರಳಾಡಿದ್ದ ಕಾರ್ಮಿಕರು ಸತತ ಐದು ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ, ಒಬ್ಬರ ಹಿಂದೆ ಒಬ್ಬರಂತೆ ಇಂದಿನವರೆಗೆ 8 ಜನ ಕಾರ್ಮಿಕರಲ್ಲಿ 7 ಜನ ಸಾವನ್ನಪ್ಪಿದ್ದಾರೆ. ಅಮಿತ್, ಸನೋಜ್, ನೀರಜ್, ಸೋಮಯ್ ಗುಪ್ತಾ, ತಿಲಕ್ ರಾಮ್, ಲಕ್ಷ್ಮಣ್ ಮತ್ತು ಚಂದ್ರಭಾನ್ ಮೃತ ಕಾರ್ಮಿಕರು. ಕಾರ್ಮಿಕರಿಗೆ ಸಮರ್ಪಕ ಮೂಲಸೌಕರ್ಯ ನೀಡದೇ ಇರುವುದರ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಹಾ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ: ವಿಡಿಯೋ ವೈರಲ್