ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯಿಂದ ಸುತ್ತಮುತ್ತಲಿನ ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ಬಿಐಎಎಲ್ ಅಧಿಕಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಏರ್ಪೋರ್ಟ್ ಕಾಮಗಾರಿ ಆರಂಭ ಆದಾಗಿನಿಂದ ಸುತ್ತಲಿನ ಗ್ರಾಮದ ಜನರ ಗೋಳು ಕೇಳೋರಿಲ್ಲ. ಮೊದಲ ರನ್ ವೇ ಕಾಮಗಾರಿಯ ವೇಳೆ ಸುತ್ತಮುತ್ತಲಿನ ರೈತರ ಬೆಳೆಗಳಿಗೆ ಏರ್ಪೋರ್ಟ್ ಧೂಳಿನಿಂದ ಬರಿ ನಷ್ಟ ಅನುಭವಿಸುವಂತಾಯ್ತು. ಅದು ಮುಗಿದು ಎಲ್ಲಾ ಸರಿ ಆಯ್ತು ಅನ್ನೋವಾಗ ಎರಡನೇ ರನ್ ವೇ ಕೆಲಸ ಭರದಿಂದ ಸಾಗಿದ್ದು, ರೈತರು ಬೆಳೆದ ಬೆಳೆಗಳ ಮೇಲೆ ಧೂಳು ಬಿದ್ದು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಎಷ್ಟೋ ಬಾರಿ ಪ್ರತಿಭಟನೆ, ಮನವಿಗಳ ಮೂಲಕ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮತ್ತೇ ಏರ್ಪೋರ್ಟ್ ಅಧಿಕಾರಿಗಳು ಸಿಕ್ಕ ಕೂಡಲೇ ಅವರ ವಿರುದ್ಧ ಆಕ್ರೋಶ ಹೊರ ಹಾಕಿದರು.
ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಮದಲ್ಲಿ ಏರ್ಪೋರ್ಟ್ನಿಂದ ಐದು ಲಕ್ಷ ಲೀಟರ್ ನೀರಿನ ಟ್ಯಾಂಕರ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲು ಏರ್ಪೋರ್ಟ್ ಅಧಿಕಾರಿ ಮೋಹನ್ ಆಗಮಿಸಿದ್ರು. ಈ ವೇಳೆ ಕಾರ್ಯಕ್ರಮದ ಮಧ್ಯದಲ್ಲಿ ಗ್ರಾಮಸ್ಥರು ಮೋಹನ್ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಮಗೆ ಆಗುತ್ತಿರುವ ಸಮಸ್ಯೆಗಳನ್ನು ತಿಳಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಗ್ರಾಮಸ್ಥರನ್ನು ಸಮಾಧಾನ ಮಾಡಿ, ಭರವಸೆ ನೀಡಿದ್ರು.