ಬೆಂಗಳೂರು: ಮಹಾನಗರವನ್ನು 'ಟೆರರಿಸ್ಟ್ ಹಬ್' ಅಂತ ಹೇಳುವ ಮೂಲಕ ಕನ್ನಡಿಗರನ್ನು ಸಂಸದ ತೇಜಸ್ವಿ ಸೂರ್ಯ ಅಪಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆದ ಪ್ರತಿಭಟನೆಯ ನಂತರ ಮಾತನಾಡಿದ ಅವರು, ಆತ ತೇಜಸ್ವಿ ಅಲ್ಲ, ಅಮಾವಾಸ್ಯೆ ಸೂರ್ಯ. ರಾಷ್ಟ್ರೀಯ ನಾಯಕರನ್ನು ಮೆಚ್ಚಿಸುವ ಸಲುವಾಗಿ ತೇಜಸ್ವಿ ಸೂರ್ಯ ಆಡಿರುವ ಮಾತಿನಿಂದ ನಾಡಿಗೆ ದೊಡ್ಡ ಅವಮಾನ ಆಡಿದೆ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ಯಡಿಯೂರಪ್ಪನವರೇ ನಿಮ್ಮ ಸಂಸದ ರಾಜ್ಯಕ್ಕೆ ಅಪಮಾನ ಮಾಡಿದ್ದಾರೆ, ನಾವು ಇದನ್ನು ಸಹಿಸುವುದಿಲ್ಲ ಎಂದರು.
ಶೀಘ್ರದಲ್ಲೇ ಬೆಂಗಳೂರಿನಲ್ಲಿ ಎನ್ಐಎ ಶಾಶ್ವತ ಕಚೇರಿ: ಸಂಸದ ತೇಜಸ್ವಿಗೆ ಅಮಿತ್ ಶಾ ಭರವಸೆ
ಮೊದಲು ಬೆಂಗಳೂರಿಗೆ ಬಂದು ಆಮೇಲೆ ದೆಹಲಿಗೆ ಬರುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಅಂತ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರಿಗೆ ಅತ್ಯಂತ ಉತ್ಕೃಷ್ಟವಾದ ಇತಿಹಾಸ ಇದೆ. ಸಂಸದರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ, ಮೊದಲು ಕ್ಷಮೆ ಕೇಳಲಿ. ಇಂದು ಬೆಂಗಳೂರನ್ನು ಜಗತ್ತು ನೋಡುತ್ತಿದೆ, ಪ್ರಪಂಚದ ಹಲವು ದೇಶಗಳಿಗೆ ಈ ಮಹಾನಗರ ಇಂಜಿನಿಯರ್ಗಳನ್ನು ಕೊಟ್ಟಿದೆ. ಐಟಿ ಹಬ್ ಆಗಿ ಬೆಂಗಳೂರು ಅಭಿವೃದ್ಧಿ ಹೊಂದಿದೆ. ತೇಜಸ್ವಿ ಸೂರ್ಯ ಕನ್ನಡಿಗರನ್ನು ಅವಮಾನಿಸಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದು ಡಿಕೆಶಿ ಹೇಳಿದರು.
ರಾಜ್ಯದಲ್ಲಿ 6 ಕೋಟಿ ಜನರಿದ್ದಾರೆ. ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ ಜನರ ಸಹಿ ಸಂಗ್ರಹ ಮಾಡುತ್ತಿದೆ. ಭೂ ಸುಧಾರಣಾ ಕಾಯ್ದೆಯಿಂದ ರಾಜ್ಯದಲ್ಲಿ ಸಾಕಷ್ಟು ರೈತರು ಅನುಕೂಲ ಪಡೆದಿದ್ದರು. ಆದರೆ ಇದೀಗ ತಿದ್ದುಪಡಿಯಿಂದ ಅಷ್ಟೇ ದೊಡ್ಡ ಸಂಖ್ಯೆಯ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಜನರಿಗೆ ಮನವರಿಕೆ ಮಾಡಿ ಸಹಿ ಸಂಗ್ರಹಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.