ದೇವನಹಳ್ಳಿ: ನಾಳೆ ಕಾಂಗ್ರೆಸ್ನ ನೂತನ ಸರ್ಕಾರ ರಚನೆಯಾಗಲಿದೆ. ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನೂ ಹಲವು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸಚಿವ ಸ್ಥಾನಗಳನ್ನು ಅಂತಿಮಗೊಳಿಸಲು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿಶೇಷ ವಿಮಾನದಲ್ಲಿಂದು ದೆಹಲಿಗೆ ಪ್ರಯಾಣಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಚಿವಾಕಾಂಕ್ಷಿಗಳ ದಂಡು ಕಾಣಿಸಿಕೊಂಡಿದ್ದು, ಬೆಳಗ್ಗೆಯಿಂದ ಸುಮಾರು 30 ಶಾಸಕರು ದೆಹಲಿಗೆ ತೆರಳಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆನೇಕಲ್ ಕಾಂಗ್ರೆಸ್ ಶಾಸಕ ಶಿವಣ್ಣ, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ದೆಹಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಶಾಸಕರಾದ ಕೆ ಹೆಚ್ ಮುನಿಯಪ್ಪ, ಶಿವರಾಜ್ ತಂಗಡಗಿ, ಸಿ ಎಸ್ ನಾಡಗೌಡ, ಅಶೋಕ್ ರೈ, ಕೆ ಎನ್ ರಾಜಣ್ಣ, ಕೆ ಆರ್ ರಾಜೇಂದ್ರ, ಎಂಎಲ್ಸಿ ಅರವಿಂದ ಅರಳಿ, ಕೃಷ್ಣ ಬೈರೇಗೌಡ, ಎನ್ ಎ ಹ್ಯಾರಿಸ್, ಶ್ರೀನಿವಾಸ್ ಮಾನೆ, ರಿಜ್ಚಾನ್ ಹರ್ಷದ್, ಈಶ್ವರ್ ಖಂಡ್ರೆ, ರಹಿಂ ಖಾನ್, ಕೆ ಸಿ ವಿರೇಂದ್ರ, ಗೋವಿಂದಪ್ಪ, ಡಿ. ಸುಧಾಕರ್, ರಘುಮೂರ್ತಿ ಟಿ, ಅಜಯ್ ಸಿಂಗ್, ಯಶ್ವಂತ್ ರಾಜ್ ಗೌಡ ಪಾಟೀಲ್, ಎಂ ಸಿ ಸುಧಾಕರ್, ಪ್ರದೀಪ್ ಈಶ್ವರ್, ಬೆಲೂರು ಗೋಪಾಲಕೃಷ್ಣ, ನಾಗೇಂದ್ರ, ಕಾಶಪ್ಪನವರ್, ಆರ್ ವಿ ದೇಶಪಾಂಡೆ, ಆರ್ ಬಿ ತಿಮ್ಮಾಪುರ, ಎಂ. ಬಿ. ಪಾಟೀಲ್, ಶರತ್ ಬಚ್ಚೇಗೌಡ, ಪ್ರಿಯಾಂಕ್ ಖರ್ಗೆ, ಶರಣು ಪ್ರಕಾಶ್ ಪಾಟೀಲ್ ದೆಹಲಿಗೆ ದೌಡಾಯಿಸಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿದ್ದ ಸಿಎಂ ಯಾರು ಎನ್ನುವ ಪ್ರಶ್ನೆ ಬಗೆಹರಿದು ನಾಳೆ ಸಿಎಂ ಹಾಗೂ ಡಿಸಿಎಂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಇದರ ಬೆನ್ನಲ್ಲೆ ಸರ್ಕಾರ ರಚನೆಯಾಗಬೇಕಿದೆ. ಆ ಹಿನ್ನೆಲೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ದೆಹಲಿಗೆ ಪ್ರಯಾಣಿಸಿ ಹೈಕಮಾಂಡ್ ಜೊತೆಗೆ ಮಾತುಕತೆಯನ್ನೂ ನಡೆಸುತ್ತಿದ್ದಾರೆ. ಆದರೆ ಹೈಕಾಂಡ್ ಯಾರಿಗೆ ಯಾವ ಸಚಿವ ಸ್ಥಾನವನ್ನು ನೀಡಲಿದೆ ಎನ್ನುವುದೇ ನಿಗೂಢ ಪ್ರಶ್ನೆಯಾಗಿದೆ.
ಯಾಕೆಂದರೆ ಈ ಬಾರಿ ಕಾಂಗ್ರೆಸ್ ಪಕ್ಷ ಕೇವಲ ಬಹುಮತ ಮಾತ್ರವಲ್ಲ ಐತಿಹಾಸಿಕ ಸಾಧನೆ ಎಂಬಂತೆ 135 ಕ್ಷೇತ್ರಗಳಲ್ಲಿ ವಿಜಯ ಪತಾಕೆಯನ್ನು ಹಾರಿಸಿ ರಾಜ್ಯದ ಗದ್ದುಗೆ ಏರಿದೆ. ಈ ಗೆಲುವಿನ ಹಿಂದೆ ಪಕ್ಷದ ಹೈಕಮಾಂಡ್, ರಾಜ್ಯದ ಕಾಂಗ್ರೆಸ್ ನಾಯಕರು, ಪಕ್ಷದ ಕಾರ್ಯಕರ್ತರು ಹಾಗೂ ಈಗ ಶಾಸಕರಾಗಿರುವವರ ಪಾಲೂ ಇವೆ. ಇದೇ ಕಾರಣ ಮುಂದಿಟ್ಟುಕೊಂಡು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ತಾವು ದುಡಿದಿರುವುದನ್ನು ಪರಿಗಣಿಸಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಕೆಲ ಶಾಸಕರು ದಂಬಾಲು ಬಿದ್ದರೆ ಇನ್ನೂ ಕೆಲವು ತಮ್ಮ ಜಾತಿ ಕೋಟಾ ಅಡಿಯಲ್ಲಿ ತಮ್ಮಗೆ ಇಂಥದ್ದೇ ಖಾತೆಯನ್ನು ನೀಡಬೇಕು ಎನ್ನುವ ಒತ್ತಾಯವನ್ನೂ ಮಾಡಿದ್ದಾರೆ. ಈಗ ಇರುವ 135 ಶಾಸಕರಲ್ಲಿ ಯಾರಿಗೆ ಯಾವ ಖಾತೆ ಎನ್ನುವುದು ನಾಳೆಯಷ್ಟೆ ಬಹಿರಂಗವಾಗಬೇಕಿದೆ.
ಇದನ್ನೂ ಓದಿ: ಸಚಿವ ಸ್ಥಾನಕ್ಕಾಗಿ ತುಮಕೂರು ಜಿಲ್ಲೆಯ ಕಾಂಗ್ರೆಸ್ ಶಾಸಕರಿಂದ ಲಾಬಿ