ನೆಲಮಂಗಲ: ಗುರುಗಳು ಕೂಡ ದಕ್ಷ ಆಡಳಿತಗಾರರಾಗಬಹುದೆಂದು ಯೋಗಿ ಆದಿತ್ಯನಾಥ್ ನಿರೂಪಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ವತಿಯಿಂದ ನೂತನವಾಗಿ ನಿರ್ಮಿಸಿರುವ ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯೋಗಿ ಆದಿತ್ಯಾನಾಥ್ ಅವರು, ತತ್ವಜ್ಞಾನ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳೆಂದು ತೋರಿಸಿಕೊಟ್ಟಿದ್ದರೆ ಹಾಗೂ ಆಧ್ಯಾತ್ಮ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳೆಂದು ನಿರೂಪಿಸಿದ್ದಾರೆ ಎಂದು ಹೇಳಿದರು.
ಉತ್ತರದಿಂದ ದಕ್ಷಿಣದವರೆಗೂ ಅವರು ಮನೆ ಮಾತಾಗಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಗುರುಗಳಾಗಿದ್ದವರು. ನಮ್ಮ ಧರ್ಮ ಮತ್ತು ಸಮಾಜದಲ್ಲಿ ಗುರುಗಳಿಗೆ ಅತ್ಯುತ್ತಮ ಸ್ಥಾನವಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದಾರೆ. ನುಡಿದಂತೆ ನಡೆಯುತ್ತಾರೆ. ಗುರುಗಳು ಕೂಡ ದಕ್ಷ ಆಡಳಿತಗಾರರಾಗಬಹುದೆಂದು ಅವರು ನಿರೂಪಿಸಿದ್ದಾರೆ. ಹಲವಾರು ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಅವರು ಮಾಡಿದ್ದಾರೆ. ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆ ಅವರ ಆಡಳಿತದ ಪ್ರಮುಖ ಅಂಶ ಪ್ರಜಾಸತ್ತಾತ್ಮಕ, ಬಹು ಸಂಸ್ಕೃತಿ ಭಾರತದಲ್ಲಿ ಹೊಸ ಅಧ್ಯಾಯವನ್ನು ಅವರು ಬರೆದಿದ್ದಾರೆ ಎಂದರು.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಪರಿವರ್ತರಕರು. ಸಮಾಜದಲ್ಲಿರುವ ಕಂದಾಚಾರವನ್ನು ದೂರ ಮಾಡಿ, ಸಕಾರಾತ್ಮಕವಾಗಿ ಬದುಕಿಗೆ ಹೊಸ ಆಯಾಮ ನೀಡಿದ್ದಾರೆ. ಗ್ರಾಮೀಣಾಭಿವೃಧ್ಧಿ, ಎಲ್ಲರಿಗೂ ಶುದ್ಧ ಕುಡಿಯುವ ನೀರು ದೊರೆಯಬೇಕೆಂಬ ಪರಿಕಲ್ಪನೆ ಇಡೀ ಸಮಾಜದಲ್ಲಿ ಜಾಗೃತಿ ಮೂಡಿಸಿದೆ. ಧರ್ಮ, ಸಾಮಾಜಿಕ ಹೊಣೆಗಾರಿಕೆಯ್ನ ಕೈಗೆತ್ತಿಕೊಂಡಾಗ ಜನ ಪಾಲ್ಗೊಳ್ಳುತ್ತಾರೆ. ಜನರನ್ನು ಫಲಾನುಭವಿಗಳನ್ನಾಗಿಸದೇ, ಪಾಲುದಾರರನ್ನಾಗಿ ಮಾಡಿದ್ದಾರೆ. ಕೆರೆಕಟ್ಟೆ, ಸ್ಮಶಾನ ಕಟ್ಟಿದ್ದಾರೆ. ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ, ಸ್ವಾಭಿಮಾನದ ಬದುಕು ಕೊಟ್ಟಿದ್ದಾರೆ. ಧಾರವಾಡ ಮೆಡಿಕಲ್ ಕಾಲೇಜು, ಉಜಿರೆಯಲ್ಲಿ ಆಯುರ್ವೇದ ಕಾಲೇಜುಗಳನ್ನು ಕಟ್ಟಿದ್ದಾರೆ. ಕ್ಷೇಮನವದ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.
ನಿರ್ಮಲಾನಂದ ಗುರುಗಳು, ವಿದ್ಯೆಯಲ್ಲಿ, ಆಡಳಿತದಲ್ಲಿ, ಆಧ್ಯಾತ್ಮಿಕತೆಯಲ್ಲಿ ಸಾಧನೆ ಮಾಡಿದ್ದಾರೆ. ಬಡವರಿಗೆ ವಿದ್ಯೆ ಹಾಗೂ ಆಶ್ರಯ ನೀಡಿ ದಕ್ಷಿಣ ಕರ್ನಾಟಕ ಜೊತೆ ಉತ್ತರ ಕರ್ನಾಟಕದಲ್ಲಿಯೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದಾರೆ. ಕಾನೂನಾತ್ಮಕವಾಗಿ, ತಾತ್ವಿಕವಾಗಿ, ವೈಜ್ಞಾನಿಕವಾಗಿ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆಗಮನ.. ಬೆಂಗಳೂರಿನಲ್ಲಿ ಕ್ಷೇಮವನ ಉದ್ಘಾಟನೆ