ದೊಡ್ಡಬಳ್ಳಾಪುರ: ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಕನದಲ್ಲಿದ್ದ ಕೇಶವಮೂರ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕೇಶವಮೂರ್ತಿ ಅವರು ರಾಜನುಕುಂಟೆಯ ಹಾಲಿನ ಡೇರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಎಂಎಫ್ ಸಂಸ್ಥೆಯೂ ಒಂದು. ಕೆಎಂಎಫ್ ಸಂಸ್ಥೆಯ ಅಂಗ ಸಂಸ್ಥೆಗಳಾದ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. ಒಕ್ಕೂಟದ 13 ನಿರ್ದೇಶಕರ ಸ್ಥಾನಗಳಲ್ಲಿ 8 ಕಾಂಗ್ರೆಸ್ ಬೆಂಬಲಿತ, 3 ಜೆಡಿಎಸ್ ಬೆಂಬಲಿತ ಹಾಗೂ 2 ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಒಕ್ಕೂಟದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಬಮೂಲ್ ಅಧ್ಯಕ್ಷರ ರೇಸ್ನಲ್ಲಿ ಸಾಕಷ್ಟು ಪೈಪೋಟಿ ಇದ್ದು, ಪ್ರಮುಖವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬೆಂಗಳೂರಿನಿಂದ ಆಯ್ಕೆಯಾಗಿರುವ ಕೇಶವಮೂರ್ತಿ ಹೆಸರು ಕೇಳಿ ಬರುತ್ತಿದೆ. ಕೃಷಿ ಸಚಿವ ಕೃಷ್ಣಬೈರೇಗೌಡ, ಸಂಸದ ವೀರಪ್ಪ ಮೊಯ್ಲಿ, ಶಾಸಕ ಟಿ. ವೆಂಕಟರಮಣಯ್ಯರವರಿಂದ ಕೇಶವಮೂರ್ತಿ ಹೆಸರು ಚಾಲ್ತಿಗೆ ಬಂದಿದೆ. ತೆರೆಮರೆಯಲ್ಲಿ ಬಮೂಲ್ ಅಧ್ಯಕ್ಷರಾಗಲು ಕೇಶವಮೂರ್ತಿ ಪ್ರಯತ್ನ ನಡೆಸುತ್ತಿದ್ದಾರೆ. ಅಂತಿಮವಾಗಿ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯುತ್ತೋ ಕಾದು ನೊಡಬೇಕಾಗಿದೆ.