ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒತ್ತುವರಿ ವಿರುದ್ಧ ಪುನಃ ಜೆಸಿಬಿಗಳ ಗರ್ಜನೆ ಮುಂದುವರೆದಿದ್ದು, ಪ್ರತಿಷ್ಠಿತ ವಿಪ್ರೋ, ಸಲಾರ್ ಪುರಿಯಾ ಸಂಸ್ಥೆಗಳಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಮಹದೇವಪುರ ವಲಯದಲ್ಲಿ ಇಂದು 5 ಕಡೆ ತೆರವು ಕಾರ್ಯಾಚರಣೆ ಮಾಡಲಾಯಿತು.
ಮಾರತಹಳ್ಳಿ ಪೊಲೀಸ್ ಠಾಣೆಯ ಹಿಂಬದಿಯಿರುವ ಜಲಮಂಡಳಿಯ ಎಸ್ಟಿಪಿ ಬೆಳ್ಳಂದೂರು ಕೆರೆಯ ಕೋಡಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆ ಅನ್ನು ಬಿಬಿಎಂಪಿ ತೆರವುಗೊಳಿಸಿತು. ಮಹಾದೇವಪುರ ವಲಯ, ದಾಸರಹಳ್ಳಿ ವಲಯ ಸೇರಿದಂತೆ ಹಲವು ಭಾಗಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಯಿತು.
ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಿಲ್ಲಿಸಿದ್ದ ಬಿಬಿಎಂಪಿ ಇಂದು ವಿಲ್ಲಾಗಳು ಸೇರಿದಂತೆ 5 ಕಡೆಗಳಲ್ಲಿ ತೆರವು ಕಾರ್ಯ ನಡೆಸಲು ಮುಂದಾಗಿದೆ. ಕಸವನಹಳ್ಳಿ, ವಿಪ್ರೋ, ಸಲಾರ್ಪುರಿಯ, ಗ್ರೀನ್ವುಡ್ ರೆಸಿಡೆನ್ಸಿ, ಸಕ್ರಾ ಆಸ್ಪತ್ರೆಯ ಹಿಂಭಾಗದ ರಸ್ತೆ, ಸ್ಟರ್ಲಿಂಗ್ ಅಪಾರ್ಟ್ಮೆಂಟ್, ಪೂರ್ವ ಪಾರ್ಕ್ ರಿಡ್ಜ್ ಹಿಂದಿನ ರಸ್ತೆಗಳ ಶೆಡ್ಗಳ ತೆರವುಗೊಳಿಸಲಾಗುತ್ತಿದೆ.
ವಿಪ್ರೋ, ಸಲಾರ್ ಪುರಿಯಾ ಒತ್ತುವರಿ ತೆರವು: ಪ್ರಮುಖವಾಗಿ ವಿಪ್ರೋ, ಸಲಾರ್ ಪುರಿಯಾ ಸಂಸ್ಥೆಯಿಂದ ಸಾವಳಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯನ್ನು ಕಬಳಿಕೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ, ಕಂದಾಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ಗುರುತು ಮಾಡಿದ್ದರು. ಅದರಂತೆ ಇಂದು 10 ಅಡಿಯಷ್ಟು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವು ಮಾಡಲಾಯಿತು ಎಂದು ಮಹಾದೇವಪುರ ವಲಯದ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಶೆಡ್ಗಳ ತೆರವು - ಸ್ಥಳೀಯರ ಆಕ್ರೋಶ: ಈ ವ್ಯಾಪ್ತಿಯಲ್ಲಿ ಶೆಡ್ಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾದ ವೇಳೆ ಸ್ಥಳೀಯರು, ಕಟ್ಟಡ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.
ಖಾಲಿ ಜಾಗದಲ್ಲಿ ತೆರವು ಮಾಡುವುದು ಅದ್ಯಾವ ನೀತಿ ಸರ್. ದೊಡ್ಡ ಬಿಲ್ಡಿಂಗ್ ಗಳನ್ನು ಬಿಟ್ಟು, ನಮ್ ಶೀಟ್ ಹಾಕಿರುವ ಶೆಡ್ಗಳನ್ನು ಒಡೆದು ಹಾಕುತ್ತೀರಿ. ಬಾಗ್ಮನೆ, ಪೂರ್ವ ಪಾರ್ಕ್ ರಿಡ್ಜ್ ಬಿಟ್ಟು ನಮ್ ಕಡೆ ಬರುವುದು, ನ್ಯಾಯವೇ ಸರ್ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಓದಿ: ಎಲ್ಲ ಜಿಲ್ಲೆಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಆರೋಗ್ಯ ಸಚಿವ ಡಾ ಕೆ ಸುಧಾಕರ್