ದೊಡ್ಡಬಳ್ಳಾಪುರ: 370ನೇ ವಿಧಿ ರದ್ಧತಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಹೊಸದಾಗಿ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಅಲ್ಲದೆ, ಬದಲಾವಣೆ ಪರ್ವವೂ ಆರಂಭವಾಗಿದೆ ಎಂದು ಕಂದಾಯ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ 'ಒಂದು ದೇಶ ಒಂದು ಸಂವಿಧಾನ' ಮತ್ತು 'ರಾಷ್ಟ್ರೀಯ ಐಕ್ಯತೆ ಜನ ಸಂಪರ್ಕ ಅಭಿಯಾನ'ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ 370ನೇ ವಿಧಿ ರದ್ಧತಿ ಸಂಚಲನ ಉಂಟುಮಾಡಿದೆ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಅವಶ್ಯಕ ಎಂಬುದನ್ನು ತೋರಿಸಿದೆ ಎಂದರು.
ಕಾಶ್ಮೀರದಿಂದ ಕೆಲ ವರ್ಷಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ 250 ಕುಟುಂಬಗಳು ನೆಲೆಸಿದ್ದವು. ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು. ಈ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಎಸ್ಸಿ-ಎಸ್ಟಿ ಜನಾಂಗಕ್ಕೆ ಮೀಸಲಾತಿ ಅನ್ವಯವಾಗುತ್ತಿರಲಿಲ್ಲ. ಕೇಂದ್ರದ ಯೋಜನೆಗಳು ಅನುಷ್ಠಾನಗೊಳ್ಳುತ್ತಿರಲಿಲ್ಲ. ಜಮೀನು ಖರೀದಿಸುವಂತಿರಲಿಲ್ಲ. ಇದೇ ಕಾರಣಕ್ಕೆ 370ನೇ ವಿಧಿ ರದ್ದು ಮಾಡಲಾಗಿದೆ ಎಂದು ವಿವರಿಸಿದರು.
ರೈತ ನಾಯಕಿ ಸುಲೋಚನಾರೆಡ್ಡಿ ಮಾತನಾಡಿ, ರೈತರು ಬದುಕು ಕಟ್ಟಿಕೊಳ್ಳಲು ಕೃಷಿ ಮತ್ತು ನೀರಾವರಿಗೆ ಆದ್ಯತೆ ಕೊಡಬೇಕು. ಕೆರೆ ಮತ್ತು ಕಲ್ಯಾಣಿಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.