ಬೆಂಗಳೂರು: ಬಿಬಿಎಂಪಿಯ 2006-07 ರಿಂದ 2016-17 ರ ವರೆಗಿನ ಲೆಕ್ಕಪರಿಶೋಧನಾ ವರದಿ ಸಲ್ಲಿಕೆಯಾಗಿದ್ದು, ಬಿಬಿಎಂಪಿಯ ಅಕ್ರಮ, ಹಣಕಾಸು ಅಶಿಸ್ತುಗಳು ಬಯಲಾಗಿವೆ.
ಹಲವಾರು ಕಾಮಗಾರಿಗಳಿಗೆ ವರ್ಕ್ ಕೋಡ್ ನೀಡುವಾಗ ಅಧಿಕಾರಿಗಳು ನಡೆಸಿರುವ ಅಕ್ರಮವೂ ಬಯಲಾಗಿದೆ. ಕಾಮಗಾರಿಗಳಿಗೆ ವರ್ಕ್ ಕೋಡ್ ನೀಡುವಾಗ ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿರೋದು ಲೆಕ್ಕ ಪರಿಶೋಧನೆಯಲ್ಲಿ ದೃಢಪಟ್ಟಿದೆ. ಬಜೆಟ್ ಒಪ್ಪಿಗೆ ಇಲ್ಲದೆ ಕಾಮಗಾರಿಗಳಿಗೆ ವರ್ಕ್ ಕೋಡ್ ನೀಡಿರೋದ್ರಿಂದ ಪಾಲಿಕೆ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್ ತಡೆಯಲು, ಕಾಮಗಾರಿ ಪುನರಾವರ್ತನೆಗೆ ತಡೆ ನೀಡಲು ವರ್ಕ್ ಕೋಡ್ ಪದ್ಧತಿ ತರಲಾಗಿದೆ. ಆದ್ರೆ ವರ್ಕ್ ಕೋಡ್ ನೀಡುವಾಗಲೇ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ.
ಕಡಿಮೆ ವಿಸ್ತೀರ್ಣ ತೋರಿಸಿ ಕಡಿಮೆ ತೆರಿಗೆ ವಸೂಲಿ:
ಇನ್ನು ಖಾಸಗಿ ವಾಣಿಜ್ಯ ಮಳಿಗೆಗಳಿಗೆ ಕಡಿಮೆ ವಿಸ್ತೀರ್ಣ ತೋರಿಸಿ ಕಡಿಮೆ ತೆರಿಗೆ ವಸೂಲಿ ಮಾಡಲಾಗಿದೆ. ಇನ್ನು ಲೆಕ್ಕ ಪರಿಶೋಧನಾ ವರದಿಯಲ್ಲಿ ಒಟ್ಟು 4 ಸಾವಿರ ಕೋಟಿ ಆಕ್ಷೇಪಣೆಯಲ್ಲಿದ್ರೆ, 2 ಸಾವಿರ ಕೋಟಿ ವಸೂಲಿ ಮಾಡ್ಬೇಕಿದೆ. ಆದ್ರೆ ಈ ಹಣ ವಸೂಲಿ ಮಾಡಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆಯುಕ್ತ ಬಿ. ಹೆಚ್. ಅನಿಲ್ ಕುಮಾರ್, 4 ಸಾವಿರ ಕೋಟಿ ರೂ. ವಸೂಲಿ ಮಾಡಲು ಸೂಚಿಸಿದ್ದಾರೆ. ಆದರೆ ಬಿಬಿಎಂಪಿ ಈಗಾಗಲೇ 2 ಸಾವಿರ ಕೋಟಿ ರೂ. ವಸೂಲಾತಿ ಮಾಡಿದೆ. ಬಾಕಿ 2009-10,11 ಅವಧಿಯದ್ದಾಗಿದ್ದು, ಇದನ್ನು ವಸೂಲಿ ಮಾಡಲಾಗುವುದು ಎಂದರು.