ದೊಡ್ಡಬಳ್ಳಾಪುರ: ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಕುರಿತು ಪ್ರಶ್ನಿಸಿದ ಸದಸ್ಯನೊಬ್ಬನ ವಿರುದ್ಧವೇ ಉಳಿದ ಪಂಚಾಯತ್ ಸದಸ್ಯರು ಕುಡಿತದ ಆರೋಪ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಪಂಚಾಯತ್ ಸದಸ್ಯರೇ ಆದ ಆನಂದ್ ಕುಮಾರ್ ಹೆಚ್.ಕೆ. ತಿರುಗಿ ಬಿದ್ದಿದ್ದಾರೆ. ಜನರಿಗೆ ಮೂಲ ಸೌಕರ್ಯಗಳನ್ನ ಒದಗಿಸುವಂತೆ ಪಿಡಿಒಯಿಂದ ಹಿಡಿದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿವರೆಗೂ ನೂರಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ.
ಆದರೆ, ಆನಂದ್ ಕುಮಾರ್ ಅವರ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲಿಗೆ ಉಳಿದ ಸದಸ್ಯರು ಕುಡಿತದ ಆರೋಪ ಮಾಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: 3 ಲಕ್ಷದ ಟೆಂಡರ್‌ಗೆ 15 ಸಾವಿರ ಲಂಚ; ಎಸಿಬಿಗೆ ಸಿಕ್ಕಿಬಿದ್ದ ಹಾವೇರಿ ನಗರಸಭೆ ಪೌರಾಯುಕ್ತ
ಹೌದು, ಆನಂದ್ ಕುಮಾರ್ ಕುಡಿದು ಕಚೇರಿಗೆ ಬರ್ತಾರೆ, ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾರೆ, ಅಧಿಕಾರಿಗಳ ಕೆಲಸಕ್ಕೆ ತೊಂದರೆ ಕೊಡುತ್ತಿದ್ದರೆಂದು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಸದಸ್ಯರು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ, ಆನಂದ್ ಕುಮಾರ್ ಬರೆದಿರುವ ನೂರಕ್ಕೂ ಹೆಚ್ಚು ಪತ್ರಗಳಿಗೆ ಸ್ಪಂದಿಸದ ತಾಲೂಕು ಪಂಚಾಯತ್ ಇಒ, ಪಂಚಾಯತ್ ಸದಸ್ಯರ ಆರೋಪ ಪತ್ರಕ್ಕೆ ಮಾತ್ರ ಸ್ಪಂದಿಸಿ ಆನಂದ್ ಕುಮಾರ್ಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಮತ್ತು ವಿಚಾರಣೆಗಾಗಿ ಅಧಿಕಾರಿಗಳನ್ನ ಹಾಡೋನಹಳ್ಳಿ ಪಂಚಾಯಿತಿಗೆ ಕಳುಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥರು, ಜನರ ಸಮಸ್ಯೆಗಳ ನಿವಾರಣೆಗಾಗಿ ಹೋರಾಡುತ್ತಿರುವ ಆನಂದ್ ಕುಮಾರ್ ಬೆಂಬಲಕ್ಕೆ ನಾವು ನಿಂತಿದ್ದೇವೆ. ಕಳೆದ 30 ವರ್ಷಗಳಿಂದ ಹಾಡೋನಹಳ್ಳಿ ಪಂಚಾಯಿತಿಯಲ್ಲಿ ಪ್ರಶ್ನೆ ಮಾಡುವರೇ ಇರಲಿಲ್ಲ, ಈಗಾ ಅವರು ಪ್ರಶ್ನಿಸುತ್ತಿದ್ದಾರೆ. ಆನಂದ್ ಕುಮಾರ್ ಮೇಲೆ ಮಾಡಿರುವ ಕುಡಿತದ ಆರೋಪ ಕುತಂತ್ರದ ಭಾಗವೆಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಹಣ ಹೊಡೆದ್ರಾ ಅಧಿಕಾರಿಗಳು?