ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ದ್ವಿಚಕ್ರ ವಾಹನದಲ್ಲಿದ್ದ ಗೋಮಾಂಸ ರಸ್ತೆಯಲ್ಲಿ ಚೆಲ್ಲಿದೆ. ಗೋಮಾಂಸ ಕಂಡ ಸ್ಥಳೀಯರು ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವಿಚಕ್ರ ವಾಹನ ಸವಾರ ಹಾಗೂ ಬೆಂಕಿ ಇಟ್ಟ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದ ಹಿದಾಯತ್ ಉಲ್ಲಾ ಅವರು ಮನೆಯಲ್ಲಿ ಕಾರ್ಯಕ್ರಮ ಇದ್ದು, ಸೆಪ್ಟೆಂಬರ್ 16 ರಂದು ಮಾಂಸ ತರಲೆಂದು ಆಕ್ಟಿವಾ ದ್ವಿಚಕ್ರವಾಹನದಲ್ಲಿ ಹಿಂದೂಪುರಕ್ಕೆ ತೆರಳಿದ್ರು. 80 ಕೆ.ಜಿ ಗೋಮಾಂಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು.
ಅಂದು ರಾತ್ರಿ 11 ಗಂಟೆ ಸಮಯದಲ್ಲಿ ಬಾಶೆಟ್ಟಿಹಳ್ಳಿಯ ಬಳಿ ಬರುವ ವೇಳೆ ವೇಗವಾಗಿ ವಾಹನವೊಂದು ಬಂದಿದೆ. ಬ್ರೇಕ್ ಹಾಕುವಾಗ ನಿಯಂತ್ರಣ ತಪ್ಪಿದ ಹಿದಾಯತ್ ಕೆಳಗೆ ಬಿದ್ದಿದ್ದಾರೆ. ಗೋಮಾಂಸ ತುಂಬಿದ ಚೀಲ ಸಹ ಕೆಳಗೆ ಬಿದ್ದು ಮಾಂಸ ರಸ್ತೆಯಲ್ಲಿ ಹರಡಿದೆ. ಸ್ಥಳೀಯರು ಬರುವುದನ್ನು ನೋಡಿದ ಹಿದಾಯತ್ ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಜಮಾಯಿಸಿದ ಕೆಲವರು ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿದಾಯತ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೋಮಾಂಸ ಸಾಗಣೆಗೆ ಹಿದಾಯತ್ ಮತ್ತು ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟ ಮೂವರನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ಓದಿ: ಆಯತಪ್ಪಿ ಬೈಕ್ನಿಂದ ಬಿದ್ದ ಸವಾರ, ರಸ್ತೆಯಲ್ಲಿ ಚೆಲ್ಲಿದ ಮಾಂಸ: ಗೋಮಾಂಸ ಕಂಡು ಬೈಕ್ಗೆ ಬೆಂಕಿ ಇಟ್ಟ ಸ್ಥಳೀಯರು