ಹೊಸಕೋಟೆ : ಸರಗಳ್ಳತನ ಹಾಗೂ ಮನೆಗಳಲ್ಲಿನ ಚಿನ್ನಾಭರಣ ದೋಚುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಹೊಸಕೋಟೆ ಉಪ ವಿಭಾಗದ ಆವಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 15,25000 ರೂ. ಮೌಲ್ಯದ 305 ಗ್ರಾಂ ಚಿನ್ನ ಹಾಗೂ 82 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ.
ಸುರೇಶ್ ಅಲಿಯಾಸ್ ಅಪ್ಪಿ ಬಂಧಿತ ಆರೋಪಿ. ಈತ ರಾಮಮೂರ್ತಿನಗರದ ಮುನೇಶ್ವರ ಬಡಾವಣೆ ನಿವಾಸಿಯಾಗಿದ್ದು, ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಸರಗಳ್ಳತನ ಹಾಗೂ ಮನೆಗಳ್ಳತನ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಆವಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಸರಗಳ್ಳತನ ಹಾಗೂ ಮೂರು ಮನೆ ಕಳ್ಳತನ, ಮಹದೇವಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಸರಗಳ್ಳತನ, ಕೆಆರ್ ಪುರಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಮನೆ ಕಳ್ಳತನ, ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಮನೆ ಕಳ್ಳತನ, ಅನುಗೊಂಡನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಸರ ಕಳ್ಳತನ ಪ್ರಕರಣ ಸೇರಿ ಒಟ್ಟು 8 ಪ್ರಕರಣಗಳಲ್ಲಿ ಈತನ ಹೆಸರಿದೆ.
ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸುಮಾರು15,25000 ರೂ. ಮೌಲ್ಯದ 305 ಗ್ರಾಂ ಚಿನ್ನ ಹಾಗೂ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿನ್ನಾಭರಣಗಳನ್ನು ಅದರ ಮಾಲೀಕರಿಗೆ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್, ಎಎಸ್ಪಿ ಲಕ್ಷ್ಮಿಗಣೇಶ್, ಹೊಸಕೋಟೆ ಡಿವೈಎಸ್ಪಿ ನಿಂಗಪ್ಪ ಬಸಪ್ಪ ಸಕ್ರಿ ಹಸ್ತಾಂತರಿಸಿದರು.