ದೊಡ್ಡಬಳ್ಳಾಪುರ : ಬಿಹಾರದ ಪಾಟ್ನಾದಲ್ಲಿ ನಡೆಯುವ ನ್ಯಾಷನಲ್ ಇಂಟರ್ ಡಿಸ್ಟ್ರಿಕ್ಟ್ ಜೂನಿಯರ್ ಅಥ್ಲೆಟಿಕ್ ಮೀಟ್ 2023ರ (NIDJAM) ಕ್ರೀಡಾಕೂಟಕ್ಕೆ ದೊಡ್ಡಬಳ್ಳಾಪುರದ 8 ಕ್ರೀಡಾಪಟುಗಳು ಆಯ್ಕೆಯಾಗುವ ಮೂಲಕ ಹೊಸ ಭರವಸೆ ಮೂಡಿಸಿದ್ದು, ಸರ್ಕಾರ ಮತ್ತು ಸಂಘ ಸಂಸ್ಥೆಗಳ ಪ್ರೋತ್ಸಾಹದ ಕೊರತೆಯ ನಡುವೆಯೂ ಸಾಧನೆಯ ಹಾದಿಯಲ್ಲಿದ್ದಾರೆ.
ಫೆಬ್ರವರಿ 10 ರಿಂದ 12ರವರೆಗೆ ಮೂರು ದಿನ ಕ್ರೀಡಾಕೂಟ ನಡೆಯಲಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೆಲ್ಲುವ ಮೂಲಕ ಇದೀಗ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಇವರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಗ್ರಾಮೀಣ ಮತ್ತು ಕೂಲಿ ಕಾರ್ಮಿಕ ಕುಟುಂಬಗಳ ಹಿನ್ನೆಲೆಯಿಂದ ಬಂದಿರುವ ಇವರು ಕ್ರೀಡೆಯಲ್ಲಿ ಸಾಧನೆಯ ಕನಸು ಕಾಣುತ್ತಿದ್ದಾರೆ.
ತನುಶ್ರೀ ಅವರು ಟ್ರಯಥ್ಲಾನ್ ವಿಭಾಗದಲ್ಲಿ, ರಾಹುಲ್ ಕೆ ಮತ್ತು ಸಿಂಚನಾ ಹೆಕ್ಸಾಥ್ಲಾನ್ ವಿಭಾಗದಲ್ಲಿ, ನಿತೀನ್ ಗೌಡ ಎಂ ಮತ್ತು ದಿವ್ಯಾ ವಿ 600 ಮೀಟರ್ಸ್ ಓಟದಲ್ಲಿ ಕಿಶನ್ ಚಂದ್ರ ಮತ್ತು ರುಚಿತಾ ಆರ್ ಜಾವಲಿನ್ ಥ್ರೋ ವಿಭಾಗದಲ್ಲಿ, ಚೇತನ್ 1600 ಮೀಟರ್ಸ್ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋಚ್ ಹೆಚ್.ಎನ್.ಆನಂದ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉತ್ತರ ಭಾರತದಲ್ಲಿ ಚಳಿ ಕ್ರೀಡಾಪಟುಗಳಿಗೆ ದೊಡ್ಡ ಸವಾಲು. ಚಳಿ ಎದುರಿಸಲು ಇವರು ಬೆಳಗ್ಗೆ 5 ಗಂಟೆಯಿಂದಲೇ ತರಬೇತಿ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸುವ ಸ್ವರ್ಧೆಗಳಿಗೆ ಸರ್ಕಾರವೇ ಪ್ರವಾಸ ಮತ್ತು ತುಟ್ಟಿಭತ್ಯೆ (ಟಿಎಡಿಎ) ಕೊಡುತ್ತಿತ್ತು. ಆದರೆ ಕೋವಿಡ್ ನಂತರ ಟಿಎ, ಡಿಎ ಕೊಡುವುದನ್ನು ನಿಲ್ಲಿಸಿದೆ. ಸ್ಪರ್ಧಿಗಳು ತಮ್ಮ ಸ್ವಂತ ಹಣದಲ್ಲಿ ಕ್ರೀಡಾಕೂಟಕ್ಕೆ ಹೋಗಿ ಬರುವ ಪರಿಸ್ಥಿತಿ ಇದೆ. ಪ್ರತಿಯೊಬ್ಬ ಸ್ಪರ್ಧಿಗೆ 15 ಸಾವಿರ ರೂ ಖರ್ಚಾಗಲಿದೆ. ಕ್ರೀಡಾಪಟುಗಳಿಗೆ ದಾನಿಗಳ ನೆರವು ಕೂಡಾ ಸಿಗದೇ ಪೋಷಕರು ಕಷ್ಟಪಟ್ಟು ತಮ್ಮ ಮಕ್ಕಳನ್ನು ಕ್ರೀಡಾಕೂಟಕ್ಕೆ ಕಳಿಸಿಕೊಡುತ್ತಿದ್ದಾರೆ.
"ನಾವು ಕಠಿಣ ಪರಿಶ್ರಮ ಹಾಕುತ್ತಿದ್ದೇವೆ. ಪಾಟ್ನಾದಲ್ಲಿ ಸ್ಪರ್ಧೆ ಇರುವುದರಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಇಲ್ಲಿಯೇ ನಾವು ಬೆಳಿಗ್ಗೆ 5 ಗಂಟೆಗೆ ಬಂದು ಅಭ್ಯಾಸ ಮಾಡುತ್ತಿದ್ದೇವೆ. ಕೋಚ್ ಆನಂದ್ ಸರ್ ಉತ್ತಮ ತರಬೇತಿ ನೀಡುತ್ತಿದ್ದಾರೆ. ಶಾಲೆ, ಮನೆಯಲ್ಲೂ ಪ್ರೋತ್ಸಾಹ ಸಿಗುತ್ತಿದೆ. ನಮ್ಮ ಅಭ್ಯಾಸ ಮುಗಿಯುವರೆಗೂ ಪೋಷಕರು ಕಾದು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ" ಎಂದು ಸ್ಪರ್ಧಿಯೊಬ್ಬರು ಹೇಳಿದರು.
ಇದನ್ನೂ ಓದಿ: ಬಾಲಕ ಬಾರಿಸಿದ Back Heeled ಗೋಲ್ ವೈರಲ್.. ವಿದ್ಯಾರ್ಥಿ ಆಟಕ್ಕೆ ಶಿಕ್ಷಣ ಸಚಿವ ಫಿದಾ