ಬಾಗಲಕೋಟೆ: ಕೊರೊನಾ ಲಾಕ್ಡೌನ್ ಹಿನ್ನೆಲೆ ಗಂಡನಿಂದ ರಕ್ಷಣೆಗಾಗಿ ಮಹಿಳೆಯೊಬ್ಬಳು ತನ್ನ ಹಸುಗೂಸಿನೊಂದಿಗೆ ಬಿಸಿಲಲ್ಲೇ ನಡೆದುಕೊಂಡು ಹೊರಟ ಘಟನೆ ಬಾದಾಮಿ ತಾಲೂಕಿನ ತಮಿನಾಳ ಗ್ರಾಮದಲ್ಲಿ ನಡೆದಿದೆ.
ಅಶ್ವಿನಿ ದಂಡಗಿ ಕಳೆದ ಏಳು ವರ್ಷಗಳ ಹಿಂದೆ ಪ್ರೀತಿಸಿ ದೇವರಾಜ್ ಅಂಬಿಗೇರ ಎಂಬಾತನನ್ನ ಮದುವೆ ಆಗಿದ್ದಳು. ಆದರೆ ಈತ ಮತ್ತೊಂದು ಮದುವೆಯಾಗಿದ್ದಾನೆ ಎಂದು ಅಶ್ವಿನಿ ಆರೋಪಿಸಿ ಬದಾಮಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಈ ಹಿನ್ನೆಲೆ ಆತನನ್ನು ಬಂಧಿಸಲಾಗಿತ್ತು. ನಂತರ ದೇವರಾಜ್ ಜಾಮೀನಿನ ಮೇಲೆ ಹೊರ ಬಂದಿದ್ದು, ಈಗ ತನಗೆ ಜೀವಬೆದರಿಕೆ ಹಾಕಿ ಮಾನಸಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಅಶ್ವಿನಿ ಆರೋಪಿಸಿದ್ದಾಳೆ.
ಹೀಗಾಗಿ ಪುನಃ ಪತಿಯಿಂದ ಜೀವಬೆದರಿಕೆ ಇದೆ. ಈ ಹಿನ್ನೆಲೆ ರಕ್ಷಣೆ ಕೇಳಲು ಬಾದಾಮಿ ಠಾಣೆಯತ್ತ ಮಗುವಿನೊಂದಿಗೆ ರಸ್ತೆಯಲ್ಲಿ ಅಳುತ್ತಾ ನಡೆದು ಹೋಗುತ್ತಿದ್ದಾಗ ಸ್ಥಳೀಯರು ಆಕೆಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಮಿಸಿದ ಪೊಲೀಸರು ಆಕೆಗೆ ಗಂಡನಿಂದ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿ ನಂತರ ವಾಹನವೊಂದರಲ್ಲಿ ಆಕೆಯನ್ನು ಪುನಃ ಮನೆಗೆ ಕಳಿಸಿಕೊಟ್ಟಿದ್ದಾರೆ.