ಬಾಗಲಕೋಟೆ : ವೇಷಗಾರ ಕಲೆಗೆ ಈಗೀಗ ನಶಿಸುವ ಆತಂಕ ಎದುರಿಸುತ್ತಿದೆ. ಈ ಕಲೆಯನ್ನೇ ನಂಬಿ ಜೀವನ ನಡೆಸುತ್ತಿರುವ ಕಲಾವಿದರ ಬದುಕು ಇದೀಗ ಮೂರಾಬಟ್ಟೆಯಾಗಿದೆ.
ವೇಷಗಾರ ಕಲೆ ಕಲಿತಿರುವ ಜಿಲ್ಲೆಯ ಕಲಾವಿದರು ಇದೀಗ ರಬಕವಿ ಬನ್ನಹಟ್ಟಿ ಪಟ್ಟಣದಲ್ಲಿ ಬೀದಿಬೀದಿಯಲ್ಲಿ ತಮ್ಮ ಕಲೆ ಪ್ರದರ್ಶನ ಮಾಡುತ್ತಾ, ತಮ್ಮ ಜೀವನ ಸಾಗಿಸಿಕೊಳ್ಳುತ್ತಿದ್ದಾರೆ. ಅವರ ಕಲಾಸೇವೆಗೆ ಇಂದಿನ ಜನಾಂಗದಿಂದ ಸೂಕ್ತ ಬೆಲೆ, ಪ್ರೋತ್ಸಾಹ ಸಿಗುತ್ತಿಲ್ಲ.
ಇವರು ಯಾವುದೋ ವಿದ್ವಾಂಸರಿಂದ ಸಂಗೀತದ ಪಾಠವನ್ನು ಕಲಿತಿಲ್ಲ. ಆದರೂ ಸುಶ್ರಾವ್ಯವಾಗಿ ಹಾಡಬಲ್ಲರು. ಸೊಗಸಾಗಿ ವಾದ್ಯಗಳನ್ನು ನುಡಿಸಬಲ್ಲರು. ಜನ ಮೈಮರೆಯುವಂತೆ ಕುಣಿಯಬಲ್ಲರು. ಸ್ತ್ರೀ ವೇಷಧಾರಿಗಳಾಗಿ ಮಹಿಳೆಯರನ್ನೂ ಮೀರಿಸುಂತೆ ನಟಿಸುವ ಕಲೆ ಅವರಲ್ಲಿ ಅಡಗಿದೆ.
ಸನ್ನಿವೇಶದ ಪ್ರತಿ ಸಂಭಾಷಣೆಯೂ ಅವರ ನಾಲಿಗೆ ಮೇಲೆ ನರ್ತನವಾಡುತ್ತದೆ. ಅದು ಬಹುರೂಪಿಗಳಿಗೆ ರಕ್ತಗತವಾಗಿ ಬಂದ ಬಳುವಳಿಯಾಗಿದೆ. ಹಗಲುವೇಷಗಾರರು ಪೌರಾಣಿಕ ಪುರುಷರ ವೇಷಭೂಷಣಗಳಲ್ಲಿ ಬಣ್ಣ ಹಚ್ಚಿ ಬೀದಿಯಲ್ಲಿ ಕುಣಿಯ ತೊಡಗಿದರೆ ನಾಡಿನ ಇತಿಹಾಸವೇ ಕಣ್ಮುಂದೆ ಬಂದಂತಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪ್ರತಿ ಮನೆಗಳಲ್ಲೂ ಟಿವಿ ಬಂದಿರುವುದರಿಂದ, ನಮ್ಮ ಕಲಾಪ್ರದರ್ಶನಕ್ಕೆ ಬೆಲೆಯೇ ಇಲ್ಲದಂತಾಗಿದೆ. ನಮ್ಮ ಪೂರ್ವಜರಿಗೆ ಸಿಗುತ್ತಿದ್ದ ಪ್ರೋತ್ಸಾಹ ನಮಗೆ ಸಿಗುತ್ತಿಲ್ಲ ಎಂದು ವೇಷಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ರಾಗ, ತಾಳ, ಗತ್ತುಗಳೊಂದಿಗೆ ಮನಸೆಳೆಯುವ ಇವರ ಮನೋಜ್ಞ ಅಭಿನಯ ಜೀವನದಲ್ಲಿ ಎದುರಾಗುವ ಸುಖ, ದುಃಖ, ಹಿಗ್ಗು, ಉತ್ಸಾಹ, ಮರುಕ, ಕ್ರೌರ್ಯ, ಸಂತಾಪಗಳ ಪ್ರತಿಬಿಂಬವಾಗಿರುತ್ತವೆ.
ಇದನ್ನೂ ಓದಿ: ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್‌ಸಿಂಕ್, ಡ್ಯಾನ್ಸ್: ತಾಂಜಾನಿಯಾ ಪ್ರಜೆಗೆ ಅಭಿನಂದನೆ
ಅವಸಾನದ ಅಂಚಿನಲ್ಲಿರುವ ಹಗಲು ವೇಷಗಾರರ ಕಲೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಅವರ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಬೇಕಿದೆ. ಸರ್ಕಾರ ಅಥವಾ ಸಂಘ-ಸಂಸ್ಥೆಗಳು ಅವರ ನೆರವಿಗೆ ಧಾವಿಸಬೇಕಾಗಿದೆ. ಬಹುರೂಪಿಗಳ ಕಲೆ ಮತ್ತು ಕಸುಬಿಗೆ ಪ್ರಚೋದನೆ ನೀಡುವ ಅಗತ್ಯವಿದೆ.
ಆಧುನಿಕತೆಗೆ ಮಾರು ಹೋಗುತ್ತಿರುವ ಸಮಾಜದಲ್ಲಿ ಬಹುರೂಪಿಗಳ ಬದುಕು ಅತಂತ್ರವಾಗಿದೆ. ಕಲೆಯನ್ನೇ ನೆಚ್ಚಿಕೊಂಡು ಜೀವನ ನಡೆಸುವುದು ದುಸ್ತರವಾಗಿದೆ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಭವಿಷ್ಯ ರೂಪಿಸಲು ಆದ್ಯತೆ ನೀಡುತ್ತಿದ್ದೇವೆ ಎಂದು ಹಗಲು ವೇಷದಾರಿ ರಮೇಶ ಭಾರತಗಿ ತಿಳಿಸಿದರು.
ಸರ್ಕಾರ ಹಾಗೂ ಸಹಕಾರಿ ಕ್ಷೇತ್ರ ಅಷ್ಟೋ-ಇಷ್ಟೋ ಸಹಾಯ ಮಾಡಿದಲ್ಲಿ ಬುಡಕಟ್ಟು ಜನಾಂಗದಲ್ಲಿ ಬದುಕಿತ್ತಿರುವ ನಮ್ಮಂಥ ಕುಟುಂಬಗಳ ಏಳ್ಗೆಗೆ ಸಹಕಾರಿಯಾಗುವುದು ಎಂದು ಬಹುರೂಪಿ ಕಲಾವಿದ ದುರ್ಗೇಶ್ ಗಿರವಾಟ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.