ಬಾಗಲಕೋಟೆ: ಜಿಲ್ಲೆಯಲ್ಲಿ 18 ಲಕ್ಷದ 89 ಸಾವಿರ ಜನ ಸಂಖ್ಯೆಯಲ್ಲಿ 42 ಸಾವಿರು ಜನರು ಅಂಗ ಹೀನತೆ ಹೊಂದಿದ್ದಾರೆ. ವಿಶೇಷ ಚೇತನರಿಗೆ ಈ ಹೆಸರು ಎಲ್ಲಿಂದ ಬಂತು?. ಇದಕ್ಕೆ ಪಾಶ್ಚಾತ್ಯರಲ್ಲಿ ವಿಭಿನ್ನ ಹೆಸರಿನಿಂದ ಕರೆಯುವ ಪರಿಪಾಟವಿದೆ. ಆದರೆ, ಇಲ್ಲಿ 'ಅಂಗವಿಕಲರು' ಎಂಬ ಪದದ ಬಳಕೆ ಮಾಡುವುದು ಸೂಕ್ತವಲ್ಲ. ದಯವಿಟ್ಟು 'ಅಂಗಚೇತನ'ರು ಎಂಬ ಪದ ಬಳಕೆ ಮಾಡಿ ಎಂದು ಅಂಗಚೇತನ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸವಿತಾ ಕಾಳೆ ಕರೆ ನೀಡಿದ್ದಾರೆ.
ಜಿಲ್ಲೆಯ ನವನಗರದ ಅಂಬೇಡ್ಕರ್ ಭವನದಲ್ಲಿ ವಿಶ್ವ ಅಂಗಚೇತನರ ದಿನಾಚರಣೆಯ ಸಮಾರಂಭ ಜರುಗಿತು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎ ಬಿ ತೋಟದ ಹಾಗೂ ಅಂಗಚೇತನ ಮಕ್ಕಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಸೇರಿ ಇತರ ಪ್ರಮುಖರು ಬರಬೇಕಿತ್ತು. ಆದರೆ, ಇವರು ಸಮಾರಂಭಕ್ಕೆ ಬರದೇ ಕೇವಲ ಕಾಟಾಚಾರಕ್ಕೆ ಆಚರಣೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರಿಂದ ನಮ್ಮ ಕೂಗು ಯಾರಿಗೆ ಹೇಳಬೇಕು?. ಹೀಗಾಗಿ, ಇದೇ ತಿಂಗಳ 20 ರಂದು ಉಪವಾಸ ಸತ್ಯಾಗ್ರಹ ಮಾಡಲು ನಾವೆಲ್ಲ ಸೇರಿ ತೀರ್ಮಾನಿದ್ದೇವೆ. ಮಗು ಅತ್ತಾಗ ತಾಯಿ ಹಾಲು ಕೊಡುವಂತಹ ಕಾಲ ಇಂದಿನದು. ಹಾಗಾಗಿ ಅವರು ಇಲ್ಲಿಗೆ ಬರದಿದ್ದರೆ ನಾವು ಸಮಸ್ಯೆಯನ್ನು ಯಾರಿಗೆ ಹೇಳಬೇಕು? ಎಂದು ಅಂಗಚೇತನರ ಮುಖಂಡರಾಗಿರುವ ರಘು ಹುಬ್ಬಳ್ಳಿ ಆಕ್ರೋಶ ವ್ಯಕ್ತಪಡಿಸಿದರು.