ಬಾಗಲಕೋಟೆ: ದಕ್ಷಿಣ ಭಾರತ ಅಂತರ್ ಶಾಲಾ ಮಟ್ಟದ(ಸಿಬಿಎಸ್‍ಇ)ಹಾಕಿ ಪಂದ್ಯಾವಳಿಯ19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅತಿಥೇಯ ಬಾಗಲಕೋಟೆಯ ಬಸವೇಶ್ವರ ಸಿಬಿಎಸ್‍ಇ ಶಾಲೆ ತಂಡ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬಸವೇಶ್ವರ ಸಿಬಿಎಸ್‍ಇ ಶಾಲೆ ಚಾಂಪಿಯನ್ ಪಟ್ಟದ ಜೊತೆಗೆ ನವೆಂಬರ್ 14 ರಿಂದ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಆಡಲು ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.
ಅದೇ ರೀತಿ 19 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಾಗಪುರದ ಸ್ವಾಮಿನಾರಾಯಣ ಶಾಲಾ ತಂಡ,17 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಕೊಡಗಿನ ಭಾರತೀಯ ವಿಧ್ಯಾಭವನ ಶಾಲೆಯ ತಂಡ ಚಾಂಪಿಯನ್ ಪಟ್ಟವನ್ನು ಪಡೆಯುವ ಮೂಲಕ ಅಖಿಲ ಭಾರತ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಆಡಲು ಅರ್ಹತೆಯನ್ನು ಪಡೆದುಕೊಂಡವು.
ಬಾಲಕರ ವಿಭಾಗದಲ್ಲಿ ಅತಿಥೇಯ ಬಿಪ್ಸ್ ಶಾಲೆಯ ರಾಜು ಮಠ ಹಾಗೂ ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಸ್ಕೂಲ್ ಆಫ್ ಸ್ಕಾಲರ್ಸ್ ಅಕೋಲಾದ ಕುಮಾರಿ ಸಾಯಿ ದೇಶಮುಖ್ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದರು.
ಬಿಪ್ಸ್ ಶಾಲೆಯ ಕುಮಾರ ಸುದೀಪ್ ಕೊನೇರಿ, ನಾಗಪುರದ ವಿಮಲಾತಾಯಿ ಶಾಲೆಯ ಕುಮಾರಿ ಜಿಯಾ ಸಿಂಗ್, ಮಹಾರಾಷ್ಟ್ರದ ಸಂಜೀವನ್ ಪಬ್ಲಿಕ್ ಶಾಲೆಯ ಕುಮಾರ ಜಯ್ ಪಟೇಲ್ ಹಾಗೂ ಕೊಡಗಿನ ಭಾರತೀಯ ವಿದ್ಯಾಭವನ ಶಾಲೆಯ ಕುಮಾರಿ ಸಿಂಚನಾ ಇವರು ಅತ್ಯುತ್ತಮ ಆಟಗಾರರ ಪ್ರಶಸ್ತಿಗಳನ್ನು ಪಡೆದುಕೊಂಡರು. ವಿಜೇತರಿಗೆ ಅತಿಥಿಗಳಾದ ಶ್ರೀ ಶರಣ್ ನಾವಲಗಿ ಅಧ್ಯಕ್ಷತೆ ವಹಿಸಿದ್ದ ಗುರುದತ್ ಕೋರಿ ಹಾಗೂ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯಮಾನ್ಯರು ಪಾರಿತೋಷಕ ವಿತರಿಸಿದರು.