ಬಾಗಲಕೋಟೆ : ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ್ ಬೇರೆ ಕಡೆಗೆ ವರ್ಗಾವಣೆಯಾಗಿದ್ದ ಪರಿಣಾಮ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಕೆಎಟಿಗೆ ಮೊರೆ ಹೋದ ಪರಿಣಾಮ ಮತ್ತೆ ಅದೇ ಸ್ಥಳಕ್ಕೆ ಆಗಮಿಸುವ ಮೂಲಕ ವರ್ಗಾವಣೆ ಮಾಡಿಸಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಸೆಡ್ಡು ಹೊಡೆದಿದ್ದಾರೆ.
ಇತ್ತೀಚೆಗೆ ಜಿ.ಪಂ ಸಿಇಒ ಗಂಗೂಬಾಯಿ ಅವರಿಗೆ ಸರ್ಕಾರ ವರ್ಗಾವಣೆ ಮಾಡಿ,ಅವರ ಜಾಗಕ್ಕೆ ಇಕ್ರಮ್ ಮೊಹಮ್ಮದ್ ಎಂಬುವವರನ್ನು ನೇಮಕ ಮಾಡಿ ಆದೇಶ ಮಾಡಲಾಗಿತ್ತು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಇಕ್ರಮ್ ಪರವಾಗಿ ಸಿಇಒ ಆಗಿ ಆದೇಶ ಮಾಡಿಸಿದ್ದರು. ಆದರೆ, ಇದನ್ನು ಪ್ರಶ್ನೆ ಮಾಡಿ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ದೂರು ಸಲ್ಲಿಸಿ, ತಮ್ಮ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಮನವಿ ಮಾಡಿದ್ದಾರೆ.
ಕಳೆದ ಹಲವು ವರ್ಷಗಳಿಂದಲೂ ಇದೇ ರೀತಿಯಾದ ವರ್ಗಾವಣೆಯಾಗುವ ಮೂಲಕ ತಮ್ಮ ಮಗಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಮಾರ್ಚ್ ವರೆಗೆ ಶಿಕ್ಷಣ ಪೂರ್ಣ ಆಗುವವರೆಗೂ ವರ್ಗಾವಣೆ ಮಾಡದಂತೆ ನ್ಯಾಯಾಧೀಕರಣದ ಮೆಟ್ಟಲು ಏರಲು ಮರಳಿ ಆದೇಶ ತಂದಿದ್ದಾರೆ. ಈಗ ಇದ್ದ ಇಕ್ರಮ್ ಕೆಲಸದ ಮೇಲೆ ಜಿಲ್ಲಾಧಿಕಾರಿಗಳ ಜೊತೆಗೆ ಬದಾಮಿಗೆ ಹೋದ ಸಮಯದಲ್ಲಿ ಕಚೇರಿಗೆ ಬಂದು, ತಾವೇ ಅಧಿಕಾರ ಸ್ವೀಕಾರ ಮಾಡಿಕೊಂಡಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಸಿಇಒ ಗಂಗೂಬಾಯಿ ಮಾನಕರ್, ನ್ಯಾಯಾಧೀಕರಣ ಆದೇಶದಂತೆ ಮತ್ತೆ ಅಧಿಕಾರ ಸ್ವೀಕರಿಸಿದ್ದೇನೆ. ಮಕ್ಕಳ ಶಿಕ್ಷಣಕ್ಕಾಗಿ ಆದೇಶ ರದ್ದು ಮಾಡಿದ್ದಾರೆ. ಮೇಲಧಿಕಾರಿಗಳು ಇವತ್ತೇ ಹೋಗಿ ಅಧಿಕಾರ ಸ್ವೀಕಾರ ಮಾಡುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗಿರುವ ಸಿಇಒ ಇಕ್ರಮ್ ಅವರಿಗೆ ಮೆಸೇಜ್ ಮಾಡಿದ್ದೇನೆ. ಇವತ್ತು ನಾನು ಅಧಿಕಾರ ಸ್ವೀಕಾರ ಮಾಡದೇ ಇದ್ದಲ್ಲಿ, ತೊಂದರೆ ಅನುಭವಿಸಬೇಕಾಗಿತ್ತು ಎಂದು ತಿಳಿಸಿದ್ದಾರೆ. ಸಚಿವರು ಮತ್ತು ಜಿ.ಪಂ ಸದಸ್ಯರ ವಿರೋಧ ಮಾಡಿದ ಬಗ್ಗೆ ಮಾಹಿತಿ ಇಲ್ಲಾ, ಆದರೂ ಅವರ ಜೊತೆಗೆ ಮಾತುಕತೆ ನಡೆಸಿ ಒಳ್ಳೆಯ ಸಂಬಂಧ ಇಟ್ಟುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.