ಬಾಗಲಕೋಟೆ : ಕೃಷ್ಣೆ, ಮಹಾದಾಯಿ ಮತ್ತು ನವಲಿ ಯೋಜನೆಗಾಗಿ ಆಗ್ರಹಿಸಿ ಐದು ದಿನಗಳ ಕಾಲ ನಡೆದ ಟ್ರ್ಯಾಕ್ಟರ್ ರ್ಯಾಲಿ ಸಂಕಲ್ಪ ಯಾತ್ರೆಯು ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಸಂಪನ್ನಗೊಂಡಿದೆ. ಏಪ್ರಿಲ್ 13 ರಂದು ನರಗುಂದ ದಿಂದ ಪ್ರಾರಂಭವಾದ ಯಾತ್ರೆಯು ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ 108 ಗ್ರಾಮಗಳಿಗೆ ಸಂಚಾರ ಮಾಡಿ, ಬಳಿಕ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಯಾತ್ರೆಯು ಸಮಾರೋಪಗೊಂಡಿದೆ.
ಬೀಳಗಿಯ ವೇಮ ರೆಡ್ಡಿ ಸಮುದಾಯ ಶ್ರೀಗಳ ನೇತೃತ್ವದಲ್ಲಿ ನಾಡ ಗೀತೆ, ರೈತ ಗೀತೆಯ ಮೂಲಕ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯ ಮೇಲೆ 40 ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ರೈತರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿ ನೀರಾವರಿ ಯೋಜನೆಯ ಕೂಗು ಸರ್ಕಾರಕ್ಕೆ ಮುಟ್ಟುವಂತೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಆದ ಎಸ್ ಆರ್ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಈ ನೀರಾವರಿ ಯೋಜನೆಗಳು ಅನುಷ್ಠಾನವಾದಲ್ಲಿ ಎಲ್ಲೆಡೆ ಹಚ್ಚ ಹಸಿರಾಗಿ ರೈತರು ಸಮೃದ್ಧಿ ಕಾಣುತ್ತಾರೆ. ಆಲಮಟ್ಟಿ ಜಲಾಶಯ ಹಿನ್ನೀರು ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ವಿನಾಕಾರಣ ಹರಿದು ಹೋಗುತ್ತಿರುವ ನೀರನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ರೈತರ ಪರವಾಗಿ ಐದು ದಿನಗಳ ಕಾಲ ನಡೆಸಿದ ಸಂಕಲ್ಪ ಯಾತ್ರೆಗೆ ಮೂರು ಜಿಲ್ಲೆಗಳಲ್ಲಿ ಅಭೂತಪೂರ್ವ ಬೆಂಬಲ ದೂರಕಿದೆ. ರೈತರಿಗೆ ನೀರಾವರಿ ಯೋಜನೆ ಅಗತ್ಯವಿದೆ ಎಂಬುದು ಮನವರಿಕೆ ಆಗಿದೆ. ಬಿಸಿಲಿನಲ್ಲಿಯೂ ಪ್ರತಿ ಗ್ರಾಮದಲ್ಲಿ ಸಂಚಾರ ಮಾಡಿ, ನೀರಾವರಿಯಿಂದಾಗಿ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಇದೇ ವೇಳೆ ಹೇಳಿದರು. ಯಾತ್ರೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿ, ಅಭಿವೃದ್ಧಿ ಪಡಿಸಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಶಿರಹಟ್ಟಿ ಯ ಪಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಮಾತನಾಡಿ,ಎಸ್ ಆರ್ ಪಾಟೀಲ ಅವರು, ಬಿರುಬಿಸಿಲಿನಲ್ಲಿ ಕಷ್ಟಪಟ್ಟಿದ್ದಾರೆ. ರೈತರ ಮುಖ ಬೆಳ್ಳಗೆ ಮಾಡಲು, ಎಸ್ ಆರ್ ಪಾಟೀಲ್ ಅವರು ಮುಖ ಕಪ್ಪು ಮಾಡಿಕೊಂಡಿದ್ದಾರೆ ಎಂದು ಹೇಳಿದರು. ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸಿ ನಡೆದ ಐದು ದಿನಗಳ ಯಾತ್ರೆ ಯಶಸ್ವಿಯಾಗಿದೆ.