ಬಾಗಲಕೋಟೆ : ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆದಾಗ ಪ್ರತ್ಯೇಕ ರಾಜ್ಯದ ಬೇಡಿಕೆ ಕೂಗು ಇರಲಿದೆ. ಈಗ ಒಬ್ಬ ಜವಾಬ್ದಾರಿಯುತ ಮಂತ್ರಿಯಾಗಿದ್ದೇನೆ. ಹೀಗಾಗಿ, ಆ ವಿಚಾರ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ.
ಹೀಗಾಗಿ, ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ಹೀಗಾಗಿ, ಪ್ರತ್ಯೇಕ ರಾಜ್ಯದ ಕೂಗು ಸದ್ಯಕ್ಕೆ ಬೇಕಾಗಿಲ್ಲ. ಮುಂದೆ ಮೂರ್ನಾಲ್ಕು ವರ್ಷದ ನಂತರ ನೋಡೋಣ ಎಂದರು.
ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡಿದ್ದೇವೆ. ಯೋಜನೆ ಈ ಅವಧಿಯಲ್ಲಿಯೇ ಆಗಲೇಬೇಕೆಂಬ ಹಠ ಇದೆ. ಕೃಷ್ಣಾ ನೀರು ಬೆಳಗಾವಿಗೆ ಅಷ್ಟೇ ಅಲ್ಲ.
ಬಾಗಲಕೋಟೆ, ವಿಜಯಪುರ ಹಾಗೂ ಹೈದರಾಬಾದ್ ಕರ್ನಾಟಕದ ಸಮಗ್ರ ನೀರಾವರಿಗೆ ಒಳಪಡಬೇಕು. ಅದಕ್ಕೆ ತೊಂದರೆ ಆದಾಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇರುತ್ತದೆ ಎಂದರು.
ಹೆಚ್ಚಿನ ಮತಗಳಿಂದ ಬಿಜೆಪಿ ಗೆಲ್ಲುತ್ತದೆ : ಉಪಚುನಾವಣೆ ಫಲಿತಾಂಶ ಬಗ್ಗೆ ಪ್ರತಿಕ್ರಿಯೆ ನೀಡಿ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ 50 ಸಾವಿರ ಮತಗಳಿಂದ ಜಯಭೇರಿ ಬಾರಿಸುತ್ತದೆ. ಬಿಜೆಪಿಯ ಹೊಸ ಮುಖ್ಯಮಂತ್ರಿ ನೇತೃತ್ವದ ಒಳ್ಳೆಯ ಕೆಲಸ ಮತ್ತು ಕಾಂಗ್ರೆಸ್ ಒಳಜಗಳ ಬಿಜೆಪಿಗೆ ಲಾಭ ಆಗುತ್ತದೆ.
ನಮ್ಮ ಸಿಎಂ ಬೊಮ್ಮಾಯಿ ಯಾರನ್ನೂ ಹೀಯಾಳಿಸಿಲ್ಲ, ಬೈದಿಲ್ಲ. ಕಾಂಗ್ರೆಸ್, ಜೆಡಿಎಸ್ ಇವರಿಬ್ಬರಿಂದಲೇ ಹೀಯಾಳಿಕೆ ನಡೆದಿದೆ. ಹೀಗಾಗಿ, ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಚಿವ ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಆ.15ರ ಧ್ವಜಾರೋಹಣದ ಬಳಿಕ ಈಗಲೇ ಜಿಲ್ಲೆಗೆ ತಾವು ಬಂದಿದ್ದು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕತ್ತಿ, ವಿಧಾನಸಭೆ ಕಲಾಪ ಇತ್ತು. ಅಲ್ಲದೇ ಅರಣ್ಯ ಇಲಾಖೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ನಾನೇನು ದೂರ ಇಲ್ಲ.
ಅತಿವೃಷ್ಟಿಯಿಂದ ತೊಂದರೆ ಆದಾಗ ವಾರಕ್ಕೆ ಒಮ್ಮೆ ಬಂದಿದ್ದೇನೆ. ಕೋವಿಡ್ ಬಂದಾಗ ವಾರಕ್ಕೊಮ್ಮೆ ಬಂದಿದ್ದೇನೆ. ನಾನು ಬಂದಾಗ ಕಣ್ಣಿಗೆ ಕಾಣಲ್ಲ, ನಾನು ಬಾರದೇ ಇದ್ದಾಗ ನಿಮ್ಮ ಕಣ್ಣಿಗೆ ಕಂಡಿದೆ ಎಂದು ಪ್ರತಿಕ್ರಿಯಿಸಿದರು.